5ರಂದು ಸಂಸದರ ಕಚೇರಿ ಮುಂದೆ ಧರಣಿ

 ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಯೋಗಣ್ಣ
ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಯೋಗಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ತಂಬಾಕು ಬೆಲೆ ತಾರತಮ್ಯ ಸರಿಪಡಿಸುವಂತೆ ಅಗ್ರಹಿಸಿ
  • ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಯೋಗಣ್ಣ
ಅರಕಲಗೂಡು: ತಂಬಾಕು ಬೆಲೆ ತಾರತಮ್ಯ ಸರಿಪಡಿಸುವಂತೆ ಅಗ್ರಹಿಸಿ ಜ.5ರಂದು ಹಾಸನದಲ್ಲಿನ ಸಂಸದರ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಯೋಗಣ್ಣ ತಿಳಿಸಿದರು.'
ತಂಬಾಕು ಮಾರುಕಟ್ಟೆ ಆರಂಭವಾಗಿ ಮೂರು ತಿಂಗಳು ಕಳೆದರೂ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. 320 ರೂ.ಗೆ ಪ್ರಾರಂಭವಾದ ಬೆಲೆ 275 -280 ರೂ.ಸರಾಸರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆಂಧ್ರ ಪ್ರದೇಶದಲ್ಲಿ 145 ಮಿಲಿಯನ್‌ಗೆ ಬದಲು 250 ಮಿಲಿಯನ್ ತಂಬಾಕು ಬೆಳೆದರೂ ಗರಿಷ್ಠ ಬೆಲೆ ಕಂಡುಕೊಂಡಿದೆ. ಈ ಬೆಲೆ ತಾರತಮ್ಯದ ವಿರುದ್ಧ ರಾಜ್ಯದ ಸಂಸದರಾಗಲೀ, ವಾಣಿಜ್ಯ ಇಲಾಖೆಯಾಗಲಿ ಚಕಾರ ಎತ್ತುತ್ತಿಲ್ಲ. ದೇಶಕ್ಕೆ ಒಂದೇ ತಂಬಾಕು ಮಂಡಳಿಯಾದರೂ ಈ ದರ ತಾರತಮ್ಯದ ಹಿಂದಿನ ಮರ್ಮವಾದರೂ ಏನು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಆಲೂಗಡ್ಡೆ, ರಾಗಿ, ಮತ್ತಿತರ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ಬಿಮಾ ಯೋಜನೆ ಇದೆ. ಆದರೆ 45 ಸಾವಿರ ಕೋಟಿ ರೂ. ವಿದೇಶಿವಿನಿಮಯ ತಂದು ಕೊಡುವ ತಂಬಾಕಿಗೆ ಈ ಬೆಳೆ ವಿಮೆ ಸೌಲಭ್ಯ ಏಕಿಲ್ಲ. ತಂಬಾಕು ಬೆಳೆಗೂ ಈ ಯೋಜನೆ ಜಾರಿಯಾಗಬೇಕು. ಬೆಳೆಗಾರರು ತಂಬಾಕನ್ನು ಹದಗೊಳಿಸುವ ವೇಳೆ ಬರುವ ಹೊಗೆ, ಘಾಟು ಮುಂತಾದ ಅಂಶಗಳಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ಮಂಡಳಿ ರೈತರಿಗೆ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಿಲ್ಲ. ಹಾಗಾಗಿ ಆರೋಗ್ಯ ವಿಮೆ ಜಾರಿಯಾಗಬೇಕು. ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ನಿಧಿಯಿಂದ ಮೃತಪಟ್ಟ ಕುಟುಂಬಕ್ಕೆ ರೂ. 50 ಸಾವಿರ ಸಹಾಯಧನ ನೀಡುತ್ತಿದ್ದು, ಇದನ್ನು 5 ಲಕ್ಷಕ್ಕೆ ಏರಿಸಬೇಕು ಎಂದು ಹೇಳಿದರು.
ಹಾದಿ ತಪ್ಪಿಸುವ ಕೆಲಸ: ಕೆಲವರು ರೈತ ಸಂಘದ ಅಧ್ಯಕ್ಷ ಎಂದು ಸ್ವಯಂ ಘೋಷಿಸಿಕೊಂಡು ಸಂಘವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಆರೋಪಿಸಿದರು.
10 ವರ್ಷದಿಂದ ತಾಲೂಕು ರೈತ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮಲ್ಲಿ ಈಗಾಗಲೇ 3 ಬಣಗಳ ಮುಖಂಡರು ತಮ್ಮದೇ ತಾಲೂಕು ಸಂಘ ಎಂದು ಹೇಳಿಕೊಳ್ಳುತ್ತಿವೆ. ಜಿಲ್ಲಾ ಸಮಿತಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಇದೀಗ ನನ್ನ ಅವಧಿ ಮುಗಿದಿದೆ. ಹೊಸ ಸಮಿತಿ ರಚಿಸುವಂತೆ ಜಿಲ್ಲಾ ಸಮಿತಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಇದುವರೆಗೂ ಆಗಿಲ್ಲ. ಈ ಕುರಿತು ಜಿಲ್ಲಾ ಸಮಿತಿ ಗಮನ ಹರಿಸಬೇಕು ಎಂದರು.
ರೈತ ಸಂಘದ ಜಿಲ್ಲಾ ಸಂಚಾಲಕ ಬಂದಿಗನಹಳ್ಳಿ ರವಿ, ಸದಸ್ಯರಾದ ಮಂಜುನಾಥ್, ರಮೇಶ್, ಅಣ್ಣಾಜಪ್ಪ, ನಟರಾಜ್, ಈರೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net