ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಬೇಲೂರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೇಲೂರು: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ರಾತ್ರಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿ ಪಂಜಿನ ಮೆರವಣಿಗೆ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಹಿಂದುಪರ ಸಂಘಟನೆ ಮುಖಂಡ ಸಂತೋಷ್ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಪದೇ ಪದೆ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಸರಿಯಲ್ಲ. ಈ ಘಟನೆಯನ್ನು ಹಿಂದುಗಳಾದ ನಾವು ಈ ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಭಾರತೀಯರ ಸಹನೆ ಮತ್ತು ತಾಳ್ಮೆಯನ್ನು ನಿರಂತರವಾಗಿ ಕೆಣಕುತ್ತಿರುವ ಬಾಂಗ್ಲಾ ದೇಶಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಾಂಗ್ಲಾ ದೇಶದ ಹಿಂದುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಜರಂಗದಳ ಪ್ರಧಾನ ಕಾರ್ಯದರ್ಶಿ ನಾಗೇಶ್(ಗುಂಡ) ಮಾತನಾಡಿ, ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯವನ್ನು ಯಾರೂ ಸಹಿಸುವುದಿಲ್ಲ. ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಹಿಂದುಗಳ ರಕ್ಷಣೆಗೆ ಮುಂದಾಗಬೇಕು. ಅಲ್ಲದೆ ಪ್ರತಿಭಟನೆಗೆ ಮುಂದಾದ ಸಂದರ್ಭ ಪೊಲೀಸರು ನೆಹರು ನಗರ ಮತ್ತು ಜೆಪಿ ನಗರಕ್ಕೆ ಹೋಗಬಾರದು ಎಂದು ನಿಬರ್ಂಧ ವಿಧಿಸುತ್ತಿರುವುದು ಎಷ್ಟು ಸರಿ. ನಾವು ಭಾರತದಲ್ಲಿದ್ದೇವೆಯೋ ಅಥವಾ ಪಾಕಿಸ್ತಾನದಲ್ಲಿದ್ದೇವೆಯೋ ಎಂಬ ಅನುಮಾನ ಉಂಟಾಗಿದೆ ಎಂದರು.
ಪ್ರತಿಭಟನೆಯಲ್ಲಿ ಹೊಯ್ಸಳ ಆಟೋ ಚಾಲಕರ ಸಂಘದ ಅಧ್ಯಕ್ಷ ದಿವಾಕರ್, ಬಿಜೆಪಿ ಮುಖಂಡರಾದ ಶೋಭಾ ಗಣೇಶ್, ಪುರಸಭೆ ಸದಸ್ಯ ಪ್ರಭಾಕರ್, ಶ್ರೀರಾಮ ಸೇನೆ, ಬಜರಂಗದಳ ಮುಖಂಡರಾದ ಭರತ್, ಅಶೋಕ, ಲೋಕೇಶ್, ಅರುಣ್, ಯೋಗೇಶ್ ಸೇರಿದಂತೆ ಇತರರಿದ್ದರು.