ಅನಿಯಮಿತ ವಿದ್ಯುತ್ ವ್ಯತ್ಯಯ ಖಂಡಿಸಿ ಪ್ರತಿಭಟನೆ

ನಿರಂತರ ವಿದ್ಯುತ್ ವ್ಯತ್ಯಯವನ್ನು ಖಂಡಿಸಿ ವಿವಿಧ ಜನಪರ ಸಂಘಟನೆಗಳ ಮುಖಂಡರು ಹಳೇಬೀಡಿನ ಮುಖ್ಯರಸ್ತೆಯಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು
ನಿರಂತರ ವಿದ್ಯುತ್ ವ್ಯತ್ಯಯವನ್ನು ಖಂಡಿಸಿ ವಿವಿಧ ಜನಪರ ಸಂಘಟನೆಗಳ ಮುಖಂಡರು ಹಳೇಬೀಡಿನ ಮುಖ್ಯರಸ್ತೆಯಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು
Published on

ಪ್ರಮುಖ ಮುಖ್ಯಾಂಶಗಳು

  • ಸೆಸ್ಕ್ ಕಚೇರಿಗೆ ಬೀಗ ಜಡಿದು ಕರವೇ ಕಾರ್ಯಕರ್ತರ ಆಕ್ರೋಶ
ಹಳೇಬೀಡು : ಹೋಬಳಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿದ್ದು ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಹಳೇಬೀಡಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಜನಸಿರಿಯೂರು ವೃತ್ತದಿಂದ ಸೆಸ್ಕ್ ಕಚೇರಿಯವರೆಗೆ ರಸ್ತೆಯಲ್ಲಿ ಸರ್ಕಾರ ಹಾಗೂ ವಿದ್ಯುತ್ ಸರಬರಾಜು ಕಂಪನಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಸಾಗಿಬಂದ ಪ್ರತಿಭಟನಾಕಾರರು, ಜಾವಗಲ್ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಕೆಲಕಾಲ ಧರಣಿ ನಡೆಸಿದರು. ಬಳಿಕ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿಯಲು ಮುಂದಾದರು.
ಈ ವೇಳೆ ಮಾತನಾಡಿದ ಕರವೇ ಮುಖಂಡ ಸೀತಾರಾಮು, ತಿಂಗಳಿಂದ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಸೆಸ್ಕ್ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದು, 9 ತಿಂಗಳಿನಿಂದ ಶಾಖಾಧಿಕಾರಿಯನ್ನೂ ನೇಮಿಸಿಲ್ಲ. ಸರ್ಕಾರ ನಿರಂತರ ವಿದ್ಯುತ್ ಉಚಿತವಾಗಿ ನೀಡುತ್ತಿದ್ದೇವೆ ಎಂದು ಬೊಗಳೆ ಬಿಡುತ್ತಿದ್ದು, ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಬೇಕು. ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿ ಹೆಚ್ಚಿನ ಆದಾಯ ನೀಡುವ ಕೈಗಾರಿಕೆಗಳಿಗೆ ವಿದ್ಯುತ್ ಮಾರಿಕೊಳ್ಳುವ ಹುನ್ನಾರವನ್ನು ಸರ್ಕಾರದ ಮಾರ್ಗದರ್ಶದಲ್ಲಿ ವಿದ್ಯುತ್ ಕಂಪನಿಗಳು ಮಾಡುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕತ್ತಲು ಆವರಿಸುತ್ತಿದೆ ಎಂದು ದೂರಿದರು.
ರೈತ ಮುಖಂಡ ಕೆ.ಪಿ.ಕುಮಾರ್ ಮಾತನಾಡಿ, ತಿಂಗಳಿಂದ ಎಗ್ಗಿಲ್ಲದೆ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ರೈತರು ನಿದ್ದೆಗೆಟ್ಟು ನೀರು ಹಾಯಿಸಲು ಪರದಾಡುತ್ತಿದ್ದಾರೆ. ಇದಲ್ಲದೆ ಪರಿವರ್ತಕವನ್ನು ಅಳವಡಿಕೊಡಲು ಕೆಲ ಸಿಬ್ಬಂದಿ ಲಂಚ ಕೇಳುತ್ತಾರೆ. ವಿದ್ಯುತ್ ಸರಬರಾಜಿನಲ್ಲಿ ಭಾರಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೆ ವಿದ್ಯುತ್ ಕಣ್ಣಾಮುಚ್ಚಾಲೆಯನ್ನು ತಪ್ಪಿಸಿ ನಿಯಮಿತವಾಗಿ ಪೂರೈಸಬೇಕು ಅಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ಸೆಸ್ಕ್ ವಿಭಾಗಾಧಿಕಾರಿ ಮಂಜುನಾಥ್, ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ಸಮಸ್ಯೆಯನ್ನು ತಿಂಗಳೊಳಗೆ ಪರಿಹರಿಸುವುದಾಗಿ ಹೇಳಿದರು. ಇದಕ್ಕೊಪ್ಪದ ಕಾರ್ಯಕರ್ತರು ಕೂಡಲೆ ಬಗೆಹರಿಸಬೇಕೆಂದು ಪಟ್ಟು ಹಿಡಿದರು. ಮೇಲಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ, ಅತಿ ಶೀಘ್ರದಲ್ಲಿ ಸಹಾಯಕ ಇಂಜಿನಿಯರ್ ನೇಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಧರಣಿ ನಿರತರು ಪ್ರತಿಭಟನೆ ಹಿಂಪಡೆದರು.
ರೈತ ಮುಖಂಡ ಹಾಲಪ್ಪ, ಗಡಿ ಕುಮಾರ್, ಸ್ವಾಮಿಗೌಡ, ಕರವೇ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net