ಭಾರತೀಯ ಸನಾತನ ಸಂಸ್ಕೃತಿ ರಕ್ಷಿಸಿ

ಹೊಳೆನರಸೀಪುರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು. ಟಿ.ಎಸ್.ವೆಂಕಟೇಶ್, ವಿಜಯಕುಮಾರಿ ಇತರರು ಇದ್ದರು.
ಹೊಳೆನರಸೀಪುರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು. ಟಿ.ಎಸ್.ವೆಂಕಟೇಶ್, ವಿಜಯಕುಮಾರಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ
  • ಹೊಳೆನರಸೀಪುರದಲ್ಲಿ ಹಿಂದೂ ಸಮಾಜೋತ್ಸವ ಸಮಾರಂಭ
ಹೊಳೆನರಸೀಪುರ: ‘ಸರ್ವೇ ಜನಾಃ ಸುಖಿನೋ ಭವಂತು’ ಆಶಯದ ಸಂಕಲ್ಪವನ್ನು ಹೊಂದಿರುವ ಭಾರತೀಯ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ, ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭವನ್ನು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸವಿನೆನಪಿಗಾಗಿ ದೇಶಾದ್ಯಂತ ಹಿಂದೂ ಜಾಗೃತಿ, ಹಿಂದೂ ಸಮಾಜದ ಐಕ್ಯತೆ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಲಪಡಿಸುವ ಉದ್ದೇಶದಿಂದ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗುತ್ತಿದೆ. ಭಾರತದ ಶ್ರೇಷ್ಠ ಸಂಸ್ಕೃತಿ ಮತ್ತು ಪರಂಪರೆಯನ್ನು ಮತ್ತು ಸನಾತನ ಧರ್ಮದ ಮೌಲ್ಯಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ದಿಕ್ಕು ತೋರಿಸಿದವರು ಸ್ವಾಮಿ ವಿವೇಕಾನಂದರು. ಅವರ ತತ್ವ ಸಿದ್ಧಾಂತಗಳು ರಾಷ್ಟ್ರೀಯತೆ, ದೇಶ ಪ್ರೇಮ ಮತ್ತು ಸದೃಢ ಭಾರತದ ನವ ನಿರ್ಮಾಣಕ್ಕೆ ದಾರಿ ದೀಪವಾಗಿದೆ ಎಂದು ನುಡಿದರು.
ಈ ದೇಶವನ್ನು ನಿರ್ಮಿಸಲು ಹೋರಾಡಿದ ಸಾಧು ಸಂತರು, ಹೋರಾಟಗಾರರ ಕೊಡುಗೆ ಅವಿಸ್ಮರಣೀಯ. ಈ ದೇಶದ ಮತ್ತು ಮಣ್ಣಿನ ಋಣದಲ್ಲಿ ಇರುವವರೆಲ್ಲರೂ ಮೊದಲು ಈ ದೇಶದ ನೆಲ, ಜಲದ ಸಂರಕ್ಷಣೆ ಮಾಡುವ ಜತೆಗೆ ಸಂವಿಧಾನವನ್ನು ಗೌರವಿಸಬೇಕು. ನೆಲದ ಕಾನೂನುಗಳನ್ನು ಪಾಲಿಸುವ ಮೂಲಕ ದೇಶ ಪ್ರೇಮ, ದೇಶ ಭಕ್ತಿ ಮೆರೆಯಬೇಕು. ಸಾಮರಸ್ಯ, ಸೌಹಾರ್ದತೆಯ ಬದುಕು ನಮ್ಮೆಲ್ಲರದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ದೇಶದ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಅಧ್ಯಯನ ಮತ್ತು ಅವುಗಳಲ್ಲಿರುವ ಆಶಯಗಳು, ಜೀವನ ಮೌಲ್ಯವನ್ನು ಇಂದಿನ ಯುವ ಜನರಿಗೆ ತಿಳಿಸಬೇಕು. ದೇಶದ ಸಾಂಸ್ಕೃತಿಕ, ಸಾಂಪ್ರದಾಯಿಕ ಮೌಲ್ಯವನ್ನು ಪ್ರಚಂಡಗೊಳಿಸಿ ಅವಲೋಕನ ಮಾಡುವ ಕಾಲ ಬಂದಿದೆ. ಯಾವ ಧರ್ಮೀಯರೇ ಆಗಲಿ ದೇಶ ಮೊದಲು ಎನ್ನುವ ಭಾವನೆ ಎಲ್ಲರಲ್ಲಿಯೂ ಮೂಡಲಿ ಎಂದು ಹೇಳಿದರು.
ಎಸ್‌ಎಲ್‌ಎನ್ ಶಾಲೆ ಮಕ್ಕಳು, ವಾಸವಿ ಕ್ಲಬ್ ಸದಸ್ಯರು ಮತ್ತು ಇತರರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಮೇಶ್ ಮುತ್ತುರಾಜ್, ಅನುಪಮಾ ನೀಲೇಶ್, ಪ್ರದೀಪ್ ರಾಜ್, ಸುಮಲತಾ, ಕಲ್ಪನಾ, ಎಸ್.ಗೋಕುಲ್ ಇತರರು ಇದ್ದರು.
ಸಮಾರಂಭಕ್ಕೂ ಮೊದಲು ಬೈಕ್ ರ‌್ಯಾಲಿ ನಡೆಯಿತು. ಚೆನ್ನಾಂಬಿಕ ಚಿತ್ರಮಂದಿರದ ಮುಂಭಾಗದಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನದೊಂದಿಗೆ ಹಲವು ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಶೋಭಾಯಾತ್ರೆ ಜರುಗಿತು.
ಭಾರತೀಯ ಕೌಟುಂಬಿಕ ವ್ಯವಸ್ಥೆ ಶ್ರೇಷ್ಠ
ಹಿಂದೂ ಧರ್ಮವೆಂದರೆ ಒಂದು ಜೀವನ ಪದ್ಧತಿ. ನಮ್ಮ ಆಚರಣೆಗಳು, ಪದ್ಧತಿಗಳು ಏನಾದರೂ ಇರಲಿ ನಾವೆಲ್ಲೂ ಒಂದೇ ಎನ್ನುವ ರಾಷ್ಟ್ರೀಯ ಭಾವವನ್ನು ಉತ್ತೇಜಿಸುವುದು ಹಿಂದೂ ಸಮಾಜೋತ್ಸವದ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಸಂಪರ್ಕ ಪ್ರಮುಖ ಟಿ.ಎಸ್.ವೆಂಕಟೇಶ್ ಹೇಳಿದರು.
ಯಾರು ಏನಾದರೂ ಮಾಡಲಿ, ಅವರನ್ನು ಗೌರವದಿಂದ, ಮಾನವೀಯತೆಯಿಂದ ನೋಡುವ ಮನಸ್ಥಿತಿ ನಮ್ಮದಾಗಬೇಕು. ಜಾತಿಗಾಗಿ, ಭಾಷೆಗಾಗಿ, ಗಡಿಗಳಿಗಾಗಿ ಹೊಡೆದಾಟ ಮಾಡಿದ್ದು ಸಾಕು, ನಾವೆಲ್ಲರೂ ಸೇರಿ ವಸುಧಾ ಕುಟುಂಬ ರಚಿಸಬೇಕು. ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಸ್ವೀಕರಿಸುವ ಮನೋಭಾವ ನಮ್ಮಲ್ಲಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಾಮರಸ್ಯದ ಸಹಿಷ್ಣುತೆಯ ಸಮಾಜಕ್ಕೆ ಹಿಂದೂ ಧರ್ಮದ ಮೌಲ್ಯಯತ ಸಿದ್ಧಾಂತಗಳು ಬೇಕು. ಭಾರತೀಯ ಕೌಟುಂಬಿಕ ವ್ಯವಸ್ಥೆ ಪ್ರಪಂಚದಲ್ಲಿಯೇ ಅತ್ಯಂತ ವಿಶಿಷ್ಟ ಮತ್ತು ಶ್ರೇಷ್ಠ. ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವದ ಪ್ರಯುಕ್ತ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ‘ಪಂಚ ಪರಿವರ್ತನೆ’ ಎಂಬ ಐದು ಪ್ರಮುಖ ಅಂಶಗಳ ಕಾರ್ಯಸೂಚಿಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳಿಗೆ ಸಂಸ್ಕೃತಿ ಪರಿಚಯಿಸಿ
ಮೊದಲು ಮಕ್ಕಳಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಕಾರ್ಯವನ್ನು ಪ್ರತಿಯೊಂದು ಮನೆಗಳಲ್ಲಿ ಮತ್ತು ಶಾಲಾ, ಕಾಲೇಜುಗಳಲ್ಲಿ ಮಾಡಬೇಕು ಎಂದು ಆರ್‌ಎಸ್‌ಎಸ್ ಪ್ರಚಾರಕಿ ವಿಜಯಕುಮಾರಿ ಹೇಳಿದರು.
ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಕೊಡುವುದಕ್ಕಿಂತ ಮಕ್ಕಳಿಗೆ ವೀರರ, ದೇಶಭಕ್ತರು, ಶ್ರೀರಾಮ, ಶ್ರೀಕೃಷ್ಣನ ಕಥೆಗಳು, ಭಗವದ್ಗೀತೆಯ ಅಂಶಗಳನ್ನು ತಿಳಿಸಬೇಕು. ಹಿರಿಯರಿಗೆ ಗೌರವ ಕೊಡುವುದನ್ನು ಅಭ್ಯಾಸ ಮಾಡಿಸಬೇಕು. ದೇಶ ಭಕ್ತಿ, ದೇಶ ಪ್ರೇಮಿಗಳ ಜೀವನ ವೃತ್ತಾಂತದ ಪರಿಚಯ ಮಾಡಬೇಕು. ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net