ಆಲೂರಿನಲ್ಲಿ ಖಾಸಗಿ ಕ್ಲಿನಿಕ್‌ಗೆ ಬೀಗ

ಆಲೂರು ಪಟ್ಟಣದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ ಅನ್ನು ಬುಧವಾರ ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮಾ ನೇತೃತ್ವದಲ್ಲಿ ಬಂದ್ ಮಾಡಿಸಲಾಯಿತು.
ಆಲೂರು ಪಟ್ಟಣದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ ಅನ್ನು ಬುಧವಾರ ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮಾ ನೇತೃತ್ವದಲ್ಲಿ ಬಂದ್ ಮಾಡಿಸಲಾಯಿತು.
Published on
ಆಲೂರು: ಪಟ್ಟಣದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಕ್ಲಿನಿಕ್ ಅನ್ನು ಬುಧವಾರ ಬಂದ್ ಮಾಡಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮಾ ಮಾತನಾಡಿ, ಅಧಿಕೃತ ಪ್ರಮಾಣ ಪತ್ರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿತ್ತು. ಕ್ಲಿನಿಕ್ ವಿರುದ್ಧ ಸಾರ್ವಜನಿಕರಿಂದ ನಿರಂತರ ದೂರು ಬಂದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ನಿರ್ದೇಶನದಂತೆ ಬೀಗ ಹಾಕಲಾಗಿದೆ ಎಂದು ಹೇಳಿದರು.
ಈ ಹಿಂದೆ ಕ್ಲಿನಿಕ್‌ಗೆ ಭೇಟಿ ನೀಡಿದಾಗ ನಕಲಿ ಎಂಬ ಸಂಶಯ ವ್ಯಕ್ತವಾಗಿತ್ತು. ಅಗತ್ಯ ದಾಖಲೆ ಒದಗಿಸುವಂತೆ ನೋಟಿಸ್ ಜಾರಿ ಮಾಡಿದ್ದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಯಾವುದೇ ಕ್ಲಿನಿಕ್ ಆರಂಭಿಸಬೇಕೆಂದರೆ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಹಾಗೂ 2017ರ ನಿಯಮದನ್ವಯ ನೋಂದಣಿ ಆಗಿರಬೇಕು. ಅಲೋಪಥಿ ಆಸ್ಪತ್ರೆಗಳ ಫಲಕ ನೀಲಿ ಬಣ್ಣ ಹಾಗೂ ಆಯುರ್ವೇದ ಆಸ್ಪತ್ರೆಗಳ ಫಲಕ ಹಸಿರು ಬಣ್ಣದಲ್ಲಿರಬೇಕು. ಆದರೆ, ಆ ನಿಯಮ ಪಾಲಿಸಿಲ್ಲ. ಕ್ಲಿನಿಕ್‌ನಲ್ಲಿ ತ್ಯಾಜ್ಯ ವಿಲೇವಾರಿ ನಿಯಮಾನಸಾರ ಮಾಡುತ್ತಿರಲಿಲ್ಲ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕ್ರಮ ವಹಿಸಲಾಗಿದೆ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸತೀಶ್ ಮಾತನಾಡಿ, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗೆ ಬಾಡಿಗೆ ನೀಡುವ ಕಟ್ಟಡ ಮಾಲೀಕರು ವೈದ್ಯರ ವಿದ್ಯಾರ್ಹತೆ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಬೇಕು. ಆರೋಗ್ಯ ಇಲಾಖೆ ನಿಯಮಗಳ ಅನ್ವಯ ನೋಂದಣಿ ಆಗಿದೆಯೇ, ನೋಂದಣಿ ಸಂಖ್ಯೆ ಏನು ಎಂಬುದನ್ನು ತಿಳಿದು ಬಾಡಿಗೆ ನೀಡಬೇಕು. ಇಲ್ಲದಿದ್ದರೆ ನಕಲಿ ವೈದ್ಯರೊಂದಿಗೆ ಅವರನ್ನು ತಪ್ಪಿತಸ್ಥರನ್ನಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಲೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net