100ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಕುಣಿಗಲ್ ಗ್ರಾಮ ಸಮೀಪ ಮುರಿದು ಬಿದ್ದಿರುವ ವಿದ್ಯುತ್ ಕಂಬ
ಕುಣಿಗಲ್ ಗ್ರಾಮ ಸಮೀಪ ಮುರಿದು ಬಿದ್ದಿರುವ ವಿದ್ಯುತ್ ಕಂಬ
Published on
ಸಕಲೇಶಪುರ: ತಾಲೂಕಿನ ಹಲವೆಡೆ ಎರಡು ದಿನಗಳಿಂದ ಬಿರುಗಾಳಿ ಮಳೆಯಿಂದಾಗಿ ಸಾಕಷ್ಟು ಮರಗಳು ಧರೆಗುರುಳಿದ್ದು, 100ಕ್ಕೂ ಅಧಿಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಮಳೆ ಹಾಗೂ ಗಾಳಿಯಿಂದಾಗಿ ಸೋಮವಾರ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ನೀಡಲಾಗಿತ್ತು.
ತಾಲೂಕಿನ ಕುಣಿಗಾಲ್ ಗ್ರಾಮದ ಸುತ್ತಮುತ್ತ 6 ಮರಗಳು ಧರೆಗುರುಳಿದ್ದು, ಸೆಸ್ಕ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳೀಯರು ತೆರವಿಗೆ ಕೈಜೋಡಿಸಿದ್ದಾರೆ. ಹೋಂಗಡಹಳ್ಳ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಮರಗಳು ಧರೆಗುರುಳಿದ್ದು, ಕಳೆದ ಎರಡು ದಿನಗಳಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ. ಪಟ್ಟಣದ ಆಚಂಗಿ ಬಡಾವಣೆಯಲ್ಲಿ ಕಾರಿನ ಮೇಲೆ ಮರ ಉರುಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯಲ್ಲೂ ಮರಗಳು ಧರೆಶಾಯಿಯಾಗಿರುವುದರಿಂದ ಈ ಭಾಗದಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಬಿರುಸಿನ ಗಾಳಿಯಿಂದಾಗಿ ಕಾಫಿ ತೋಟದ ಮಾಲೀಕರು ತೋಟದ ಕೆಲಸಕ್ಕೆ ಬಿಡುವು ನೀಡಿದ್ದಾರೆ. ತಾಲೂಕಿನ ಜೀವನದಿ ಹೇಮಾವತಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಉಪನದಿಗಳಲ್ಲೂ ನೀರಿನ ಹರಿವು ಹೆಚ್ಚಳವಾಗಿದೆ. ಬಿರುಗಾಳಿಯಿಂದಾಗಿ ತಾಲೂಕಿನಾದ್ಯಂತ 191 ವಿದ್ಯುತ್ ಕಂಬಗಳು ಧರೆಗುರುಳಿದ್ದು, ದುರಸ್ತಿಯಲ್ಲಿ 60ಕ್ಕೂ ಅಧಿಕ ಸೆಸ್ಕ್ ಸಿಬ್ಬಂದಿ ನಿರತರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net