ಮಳೆಗಾಲದಲ್ಲಿ ವಿದ್ಯುತ್ ಕಡಿತ ಸಹಿಸಲಾಗಲ್ಲ

ಮಳೆ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿ ಬುಧವಾರ ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮಳೆ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿ ಬುಧವಾರ ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Published on

ಸೆಸ್ಕ್ ಅಧಿಕಾರಿಗಳಿಗೆ ಶಾಸಕ ಸಿಮೆಂಟ್ ಮಂಜು ವಾರ್ನಿಂಗ್

ಸಕಲೇಶಪುರ: ಮಳೆಗಾಲದಲ್ಲಿ ವಿದ್ಯುತ್ ಕಡಿತಗೊಳ್ಳುವುದನ್ನು ಸಹಿಸಲಾಗುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಸೆಸ್ಕ್ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸಮಸ್ಯೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ಮುಂಜಾಗ್ರತ ಕ್ರಮವಹಿಸುವಂತೆ ಸೂಚಿಸಿದರೂ ನಿರ್ಲಕ್ಷಿೃಸಲಾಗಿದೆ. ಕಳೆದ ಹಲವು ದಶಕಗಳಿಂದ ಮಲೆನಾಡಿನಲ್ಲಿ ಮಳೆ ವೇಳೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ಆದರೆ, ಮಳೆಗಾಲಕ್ಕೂ ಮುನ್ನ ಅಗತ್ಯ ಮುಂಜಾಗ್ರತಾ ವಹಿಸಿದರೆ ಈ ಸಮಸ್ಯೆ ತಪ್ಪಲಿದೆ ಎಂದರು.
ಮಳೆಗಾಲಕ್ಕೂ ಮುನ್ನ ವಿದ್ಯುತ್ ಲೈನ್ ಸಮೀಪ ಇರುವ ಮರಗಳನ್ನು ತೆರವುಗೊಳಿಸುವುದು, ಮಳೆಗಾಲದ ವೇಳೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡರೆ ವಿದ್ಯುತ್ ವ್ಯತ್ಯಯ ತಪ್ಪಲಿದೆ. ತಾಲೂಕಿನಲ್ಲಿ 219 ಹಾಗೂ ಆಲೂರು ತಾಲೂಕಿನಲ್ಲಿ 70 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಇನ್ನೆರಡು ದಿನಗಳಲ್ಲಿ ಈ ಎಲ್ಲ ಕಂಬಗಳನ್ನು ದುರಸ್ತಿಪಡಿಸಬೇಕು. ಸದ್ಯ ಸಕಲೇಶಪುರ ತಾಲೂಕಿನಲ್ಲಿ 88 ಪವರ್‌ಮನ್ ಕೊರತೆ ಇದ್ದು ತುರ್ತು ಕೆಲಸಕ್ಕಾಗಿ 40 ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು.
ಆಲೂರು ತಾಲೂಕಿನಲ್ಲಿ ಹೆಚ್ಚುವರಿ 6 ಸಿಬ್ಬಂದಿ ನೇಮಿಸಲಾಗುವುದು. ಸಾರ್ವಜನಿಕರೊಂದಿಗೆ ಇಂಜಿನಿಯರ್‌ಗಳು ಸರಿಯಾಗಿ ವರ್ತನೆ ಮಾಡದಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಆದರಲ್ಲೂ ಆಲೂರು ತಾಲೂಕಿನ ಇಂನಿನಿಯರ್‌ಗಳು ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು ಎಂದರು.
ಸಾರ್ವಜನಿಕರ ಸೇವೆಗಿರುವುದು: ಬಡವರ ಮನೆಗೆ ವಿದ್ಯುತ್ ನೀಡಲು ಅತಿಯಾಗಿ ದಾಖಲೆಗಳನ್ನು ಕೇಳುತ್ತಿರುವುದು ದುರದೃಷ್ಟ. ಮಂಜೂರಾತಿಯಾದ ಮನೆಗಳಿಗೆ ಗ್ರಾಪಂನಿಂದ ವಾಸ ದೃಢೀಕರಣ ಪತ್ರ ಪಡೆದು ವಿದ್ಯುತ್ ನೀಡಬಹುದು. ಆದರೆ, ವಿದ್ಯುತ್ ನೀಡದಿರಲು ಇರುವ ಕಾರಣವನ್ನೇ ಮುಂದೂಡುತ್ತಿರುವ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ನಾವಿರುವುದು ಸಾರ್ವಜನಿಕರ ಸೇವೆಗೆ ಎಂಬುದು ನೆನಪಿರಲಿ ಎಂದರು.
ಈ ವೇಳೆ ಸೆಸ್ಕ್ ಸೂಪರಿಟೆಂಡೆಂಟ್ ಇಂಜಿನಿಯರ್ ಸುನೀಲ್, ಇಇಗಳಾದ ಪ್ರಸನ್ನ, ಅರ್ಜುನ್, ವೆಂಕಟೇಶ್ ಮಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net