ಅರಸೀಕೆರೆ : ಉಪಚುನಾವಣೆ ನೆಪದಲ್ಲಿ ಒಳ ಮೀಸಲಾತಿ ಮುಂದೂಡುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಕೋಡನಹಳ್ಳಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಮಾದಿಗ ಸಮುದಾಯದ ವತಿಯಿಂದ ನಗರದ ಸಿಂಧು ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿ, ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಪ್ರಕ್ರಿಯೆಗಳು ಹಾಗೂ ನೀತಿ ಸಂಹಿತೆ ಏ.8ಕ್ಕೆ ಮುಗಿಯಲಿದೆ. 9 ರಂದು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಮತ್ತು 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಒಂದು ಸ್ಪಷ್ಟತೆಗೆ ಬರಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲಿವರೆಗೂ ಕಾದು ನೋಡುವ ತಂತ್ರಕ್ಕೆ ರಾಜ್ಯದ ಮಾದಿಗ ಸಮುದಾಯ ನಿರ್ಧರಿಸಿದ್ದು, ಆನಂತರ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.
ಮುಖಂಡ ಎಚ್.ಟಿ.ಶಿವಮೂರ್ತಿ ಮಾತನಾಡಿ, ಒಳ ಮೀಸಲಾತಿ ವರ್ಗೀಕರಣದಡಿ 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾದಿಗ ಸಮುದಾಯದ ಅಭ್ಯರ್ಥಿಗಳಿಗೆ ಒಳ ಮೀಸಲಾತಿ ಪ್ರವರ್ಗ-ಎ ವರ್ಗೀಕರಣದ ಪ್ರಕಾರವೇ ಹುದ್ದೆಗಳನ್ನು ಭರ್ತಿ ಮಾಡಬೇಕು ಎನ್ನುವ ಬೇಡಿಕೆ ನಮ್ಮದಾಗಿದೆ. ಉಪಚುನಾವಣೆಯ ನೆಪ ಹೇಳಿ ಒಳ ಮೀಸಲಾತಿ ವರ್ಗೀಕರಣವನ್ನು ಮುಂದೂಡಿರುವುದು ಮಾದಿಗ ಸಮುದಾಯಕ್ಕೆ ರಾಜ್ಯ ಸರ್ಕಾರ ಮಾಡಿದ ಅನ್ಯಾಯವಾಗಿದೆ ಎಂದರು.
ಮಾದಿಗ ದಂಡೋರ ಸಮಿತಿ ತಾಲೂಕು ಅಧ್ಯಕ್ಷ ಎ.ಪಿ.ಚಂದ್ರಯ್ಯ ಮಾತನಾಡಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದ ವರ್ಗವಾಗಿರುವ ಜನರಿಗೆ ರಾಜ್ಯ ಸರ್ಕಾರ ನ್ಯಾಯ ಒದಗಿಸಬೇಕು. ನಿಜವಾಗಿಯೂ ಅಸ್ಪಶ್ಯತೆಯ ನೋವು ಅನುಭವಿಸಿರುವ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.