ವಿದ್ಯುತ್ ಸಮಸ್ಯೆ ನಿವಾರಣೆಗೆ ಹಂತ ಹಂತವಾಗಿ ಕ್ರಮ

ಆಲೂರು ತಾಲೂಕಿನ ಮಗ್ಗೆ ಗ್ರಾಮದಲ್ಲಿ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಘಟಕದ ಕೇಂದ್ರದ ನೂತನ ಫೀಡರ್‌ಗೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿ ಮಾತನಾಡಿದರು.  ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್, ಸಹಾಯಕ  ಕಾರ್ಯಪಾಲಕ  ಇಂಜಿನಿಯರ್‌ಗಳಾದ ತಾರಾನಾಥ್, ಮಲ್ಲಿಕಾರ್ಜುನ, ನಿರಂಜನ್ ಇತರರು ಇದ್ದರು.
ಆಲೂರು ತಾಲೂಕಿನ ಮಗ್ಗೆ ಗ್ರಾಮದಲ್ಲಿ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಘಟಕದ ಕೇಂದ್ರದ ನೂತನ ಫೀಡರ್‌ಗೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿ ಮಾತನಾಡಿದರು. ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ತಾರಾನಾಥ್, ಮಲ್ಲಿಕಾರ್ಜುನ, ನಿರಂಜನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿಮೆಂಟ್ ಮಂಜು ಭರವಸೆ
  • ಮಗ್ಗೆ ಗ್ರಾಮದಲ್ಲಿ ಫೀಡರ್ ಉದ್ಘಾಟನೆ

ಆಲೂರು:

ವಿದ್ಯುತ್ ಸಮಸ್ಯೆ ನಿವಾರಣೆಗೆ ಹಂತ ಹಂತವಾಗಿ ಕ್ರಮವಹಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಮಗ್ಗೆ ಗ್ರಾಮದಲ್ಲಿರುವ 66/11 ಕೆ.ವಿ ಸಾಮರ್ಥ್ಯದ ವಿದ್ಯುತ್ ಉಪಘಟಕದ ಕೇಂದ್ರದಲ್ಲಿ ಸೋಮವಾರ ನೂತನ ಫೀಡರ್ ಉದ್ಘಾಟಿಸಿ ಮಾತನಾಡಿದರು.
1988ರಲ್ಲಿ ಸ್ಥಾಪನೆಯಾದ ಮಗ್ಗೆ ವಿದ್ಯುತ್ ಉಪ ಘಟಕವೊಂದನ್ನೇ ಅವಲಂಬಿಸಿ ಇಡೀ ಆಲೂರು ತಾಲೂಕಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಜನಸಂಖ್ಯೆ ಹಾಗೂ ಕೃಷಿ ಚಟುವಟಿಕೆ
ಹೆಚ್ಚಳಕ್ಕೆ ಅನುಗುಣವಾಗಿ ವಿದ್ಯುತ್ ಬೇಡಿಕೆ ದುಪ್ಪಟ್ಟಾಗಿದೆ. ಅದಕ್ಕೆ ಸರಿ ಸಮನಾಗಿ
ಗುಣಮಟ್ಟದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಇನ್ನೂ ಕನಿಷ್ಠ ಎರಡು ವಿದ್ಯುತ್ ಉಪ ಘಟಕಗಳ ಅಗತ್ಯವಿದೆ. ಹಂತ ಹಂತವಾಗಿ ಅವುಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇಲ್ಲಿನ ಫೀಡರ್ ಬಹಳ ಹಳೆಯದಾಗಿದೆ. ಇಲ್ಲಿಂದಲೇ ತಾಲೂಕಿನ ವಿವಿಧ ಭಾಗಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಒಂದೇ ಉಪ ಘಟಕದ ಮೇಲೆ ಹೆಚ್ಚಿನ ಒತ್ತಡ ಇರುವುದರಿಂದ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಹಾಗೂ ಗುಣಮಟ್ಟದ ವಿದ್ಯುತ್ ನೀಡಲು ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದಾನಿಯಳ್ಳಿಯಲ್ಲಿ ನೂತನ ವಿದ್ಯುತ್ ಉಪಘಟಕದ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆದರೆ ಆರು ತಿಂಗಳಲ್ಲಿ ಉಪ ಘಟಕವನ್ನು ಉದ್ಘಾಟಿಸುವ ವಿಶ್ವಾಸವಿದೆ ಎಂದರು.
ನೂತನ ಉಪಘಟಕ ಪೂರ್ಣಗೊಳ್ಳುವವರೆಗೆ ಇರುವ ವಿದ್ಯುತ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ವಿವಿಧ ಫೀಡರ್‌ಗಳನ್ನು ವಿಭಜಿಸಿ ವಿದ್ಯುತ್ ಪೂರೈಕೆಯನ್ನು ಸುಧಾರಿಸಲಾಗುತ್ತಿದೆ. ಇದರ ಭಾಗವಾಗಿ ಬಾಳ್ಳುಪೇಟೆಯಿಂದ ಕೆಂಚಾಂಬ ಫೀಡರ್‌ಗೆ ಚಾಲನೆ ನೀಡಲಾಗಿದೆ ಎಂದರು.
ಇದರಿಂದ ಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ. ಇದೇ ಮಾದರಿಯಲ್ಲಿ ಮಗ್ಗೆ ವಿದ್ಯುತ್ ಉಪಘಟಕದಿಂದ ಕಣದಳ್ಳಿ ಫೀಡರ್‌ಗೆ ಚಾಲನೆ ನೀಡಲಾಗಿದೆ ತಿಳಿಸಿದರು.
ಒಂದು ಫೀಡರ್‌ನಿಂದ ಸುಮಾರು 12 ಗ್ರಾಮಗಳಿಗೆ ಹಾಗೂ ಮತ್ತೊಂದು ಫೀಡರ್‌ನಿಂದ 13 ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ವಿದ್ಯುತ್ ಮೇಲಿನ ಒತ್ತಡ ಕಡಿಮೆಯಾಗುವುದರ ಜತೆಗೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಗುಣಮಟ್ಟದ ವಿದ್ಯುತ್ ದೊರೆಯಲಿದೆ ಎಂದರು.
ಹೊಸ ಫೀಡರ್‌ಗೆ 8 ಕಿ.ಮೀ. ಉದ್ದದ ವಿದ್ಯುತ್ ಮಾರ್ಗ ನಿರ್ಮಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದರಿಂದ ಈ ಭಾಗದ ರೈತರು ನೀರಾವರಿ ಪಂಪ್‌ಸೆಟ್‌ಗಳನ್ನು ಸುಗಮವಾಗಿ ಬಳಸಲು ಅನುಕೂಲವಾಗಲಿದೆ. ಮನೆಗಳಿಗೂ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದು ಹೇಳಿದರು.
ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ತಾರಾನಾಥ್, ಮಲ್ಲಿಕಾರ್ಜುನ, ನಿರಂಜನ್, ಕಿರಿಯ ಕಾರ್ಯಪಾಲಕ ಇಂಜಿನಿಯರ್ ಚೇತನ್, ಕಿರಿಯ ಇಂಜಿನಿಯರ್ ಬೈರೇಶ್, ಶಶಿಕಿರಣ್, ಮುಖಂಡರಾದ ಹನುಮಂತೇ ಗೌಡ, ಪೂವಯ್ಯ, ಚೇತನ್, ಪಾಳ್ಯ ದೇವರಾಜ್ ಪಿಡಿಒ ಪರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net