ಹಣಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ

 ಹಿರೀಸಾವೆ
ಹಿರೀಸಾವೆ
Published on
ಹಿರೀಸಾವೆ: ಮನುಷ್ಯ ಅದೆಷ್ಟೇ ದುಡಿದು ಹಣ, ಆಸ್ತಿ ಸಂಪಾದಿಸಿದರೂ ಅದಕ್ಕಿಂತ ಮನಸ್ಸಿಗೆ ನೆಮ್ಮದಿ ಮುಖ್ಯವಾಗಿರುತ್ತದೆ ಎಂದು ಹಿರೀಸಾವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಈ.ಬೋರಣ್ಣ ಹೇಳಿದರು.

ಪಟ್ಟಣದ ಮುದ್ರೆಕಲ್ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ 60 ಲಕ್ಷ ರೂ. ವೆಚ್ಚದೊಂದಿಗೆ ನಿರ್ಮಾಣದ ಹಂತದಲ್ಲಿರುವ 45 ಅಡಿ ಎತ್ತರದ ಶ್ರೀ ಆಂಜನೇಯಸ್ವಾಮಿ ಮೂರ್ತಿಯ ನಿರ್ಮಾಣ ಕಾಮಗಾರಿಗೆ 50 ಸಾವಿರ ರೂ. ದೇಣಿಗೆ ನೀಡಿ, ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ತಾವು ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ಧರ್ಮ ಕಾರ್ಯಗಳಿಗೆ ವಿನಿಯೋಗಿಸದಿದ್ದರೆ ಕೊಪ್ಪರಿಗೆಯಷ್ಟು ಕೂಡಿಟ್ಟರೂ ಅದು ವ್ಯರ್ಥವಾಗಲಿದೆ ಎಂದು ಅಭಿಪ್ರಾಯಪಟ್ಟರು.

ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ಗೌರವ ನೀಡುವುದರ ಜತೆಗೆ ಧರ್ಮ ಕಾರ್ಯಗಳಲ್ಲಿ ತೊಡಗಿಕೊಂಡರೆ, ಕಾಲದ ನಂತರವೂ ನಾವು ಮಾಡಿದ ಪುಣ್ಯ ಕಾರ್ಯಗಳು ಶಾಶ್ವತವಾಗಿ ಉಳಿಯಲಿವೆ ಎಂದರು.

ಜೆಡಿಎಸ್ ಮುಖಂಡರಾದ ಎಚ್.ಈ.ಬೋರಣ್ಣ ಹಾಗೂ ಎಚ್.ಜೆ.ದಿನೇಶ್ ಅವರು ಒಟ್ಟು 50 ಸಾವಿರ ರೂ. ದೇಣಿಗೆಯನ್ನು ದೇಗುಲದ ಸಮಿತಿಗೆ ಹಸ್ತಾಂತರಿಸಿದರು. ನಂತರ ಮುದ್ರಿಕಲ್ ಆಂಜನೇಯ ಸ್ವಾಮಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್.ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಸದಸ್ಯೆ ವೇದಾವತಿ ಮಂಜುನಾಥ್, ಸೊಸೈಟಿ ನಿರ್ದೇಶಕ ಹಿಂದ್ಲಟ್ಟಿ ಬೋರೇಗೌಡ, ಪ್ರಮುಖರಾದ ವೆಂಕಟೇಶ್, ಫೈನಾನ್ಸ್ ಮಹೇಶ್, ಮಂಜುನಾಥ್, ರೋಡ್ ಮಂಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಜಿ.ಮಂಜುನಾಥ್, ಡಾಬ ಬಾಬು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net