ಪ್ರಸ್ತುತ ವರ್ಷ ಕೃಷಿ ಇಲಾಖೆ ನೀಡಿದ ಅಂಕಿ ಅಂಶಗಳ ಪ್ರಕಾರ 5,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಉದ್ದೇಶ ಹೊಂದಲಾಗಿತ್ತು. ಜುಲೈ ಅಂತ್ಯಕ್ಕೆ ತಾಲೂಕಿನಲ್ಲಿ ಕೇವಲ 2,300 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗಿದೆ. ಉಳಿದ ಕೃಷಿಕರು ಅಗಸ್ಟ್ ತಿಂಗಳಿನ ಅಂತ್ಯಕ್ಕೆ 1, 000 ಹೆಕ್ಟೇರ್ ಭತ್ತ ನಾಟಿ ಮಾಡಬಹುದು ಎಂದು ಇಲಾಖೆ ಅಂದಾಜು ಮಾಡಿದೆ. ಇದರಿಂದ ಭತ್ತದ ಇಳುವರಿಯಲ್ಲಿ ಈ ಬಾರಿ ನಿಗದಿತ ಗುರಿ ತಲುಪುವುದು ಅಸಾಧ್ಯವಾಗಲಿದೆ ಎಂಬುದು ಅಧಿಕಾರಿಗಳ ಅಭಿಮತ. 2026 ರಲ್ಲಿ ಹೆಚ್ಚೆಂದರೆ 3,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಬಹುದು ಎಂದು ಕೃಷಿ ಇಲಾಖೆ ಅಂದಾಜು ವರದಿಯನ್ನು ಈಗಾಗಲೇ ಸಲ್ಲಿಸಿದೆ. ಇವೆಲ್ಲ ಅಂಕಿ, ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಾಲೂಕಿನ ರೈತರಿಗೆ ಭತ್ತದ ಕೃಷಿ ಬಗ್ಗೆ ಆಸಕ್ತಿ ಇಲ್ಲದಿರುವುದು ಗೋಚರಿಸುತ್ತದೆ. ಒಂದೂವರೆ ದಶಕದಲ್ಲಿ ತಾಲೂಕಿನಲ್ಲಿ 10,500 ಹೆಕ್ಟೇರ್ ಪ್ರದೇಶ ಭತ್ತನಾಟಿಯಿಂದ ವಿಮುಖಗೊಂಡಿದೆ ಎಂಬುದು ಚರ್ಚಾರ್ಹವಾಗಿದೆ.