ಅಧಿಕಾರಿಗಳಿಗೆ ನೋಟಿಸ್ ಜಾರಿ ಆಗಿರುವ ಗೊಂದಲಕ್ಕೆ ಕ್ಷಮೆ ಕೋರುವೆ
ಡಾ.ಬಿ.ಆರ್.ಅಂಬೇಡ್ಕರ್ 135ನೇ ಜಯಂತಿ ಅಂಗವಾಗಿ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಉದ್ಘಾಟಿಸಿದರು. ಇಒ ಸತೀಶ್, ಲಿಂಗರಾಜು, ಮಂಜೇಗೌಡ ಇತರರು ಇದ್ದರು.
ಬೇಲೂರು:ಅಂಬೇಡ್ಕರ್ ಜಯಂತಿ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಕ್ಕೆ, ಲೋಪಕ್ಕೆ ಕ್ಷಮೆ ಇರಲಿ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ತಿಳಿಸಿದ್ದಾರೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ವೇಳೆ ಅವರು ಮಾತನಾಡಿದರು.
ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಏ. 14ರಂದು ಕಚೇರಿ ಆವರಣದಲ್ಲಿ ಸರಳವಾಗಿ ಬಾಬಾ ಸಾಹೇಬರ ಜಯಂತಿ ಆಚರಿಸಿ, ಅನುದಾನ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಹೀಗಾಗಿ ಇಂದು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಳೆದ ವರ್ಷ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿರುವ ಬಗ್ಗೆ ಸಂಘಟನೆ ಮುಖಂಡರು ಗಮನಕ್ಕೆ ತಂದಿದ್ದಾರೆ. ಈ ವಿಚಾರವಾಗಿ ಯಾರೂ ಅನ್ಯತ ಭಾವಿಸಬೇಡಿ. ಆಗಿರುವ ಲೋಪಕ್ಕೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದರು.
ತಾಪಂ ಇಒ ಸತೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಕಸಾಪ ತಾಲೂಕು ಅಧ್ಯಕ್ಷ ಮಂಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಪಿ.ಐ. ರೇವಣ್ಣ ಸೇರಿದಂತೆ ಇತರರಿದ್ದರು.