ಸರ್ಕಾರ ಆದೇಶಿಸಿದ್ದರೂ ಖರೀದಿ ಇಲ್ಲ

ಪಶು ಆಹಾರ ಕಾರ್ಖಾನೆ ಹಾಸನ
ಪಶು ಆಹಾರ ಕಾರ್ಖಾನೆ ಹಾಸನ
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರ ಆದೇಶಿಸಿದ್ದರೂ ಖರೀದಿ ಇಲ್ಲ
  • ಕರ್ನಾಟಕ ಹಾಲು ಮಹಾಮಂಡಳ ವಿರುದ್ಧ ಮೆಕ್ಕೆಜೋಳ ಬೆಳೆಗಾರರ ಆಕ್ರೋಶ
ಕೆ.ಆರ್.ಪ್ರಸಿನ್ ಹಾಸನ
ಬಿಳಿ ಸುಳಿ ರೋಗದಿಂದ ನಷ್ಟಕ್ಕೀಡಾಗಿರುವ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲೆಂದು ಬೆಂಬಲ ಬೆಲೆಯಡಿ ಪ್ರತಿ ರೈತರಿಂದ 50 ಕ್ವಿಂಟಾಲ್ ಜೋಳ ಖರೀದಿಗೆ ಸರ್ಕಾರ ಆದೇಶ ಹೊರಡಿಸಿದೆಯಾದರೂ ಕರ್ನಾಟಕ ಹಾಲು ಮಹಾಮಂಡಳ ಖರೀದಿ ಮಾಡದೆ ಸರ್ಕಾರಿ ಆದೇಶಕ್ಕೂ ತಮಗೂ ಸಂಬಂಧವಿಲ್ಲ ಎಂದು ವರ್ತಿಸುತ್ತಿದೆ.
ಪ್ರತಿ ಕ್ವಿಂಟಾಲ್‌ಗೆ 2,400 ರೂ.ನಂತೆ 50 ಕ್ವಿಂಟಾಲ್ ಮಾರಾಟ ಮಾಡಬಹುದೆಂದು ರೈತರು ಖುಷಿಯಲ್ಲಿದ್ದರು. ಆದರೆ, ಕಳೆದ ಎರಡು ದಿನಗಳಿಂದ ನಗರದ ಹೊಳೆನರಸೀಪುರ ರಸ್ತೆಯಲ್ಲಿರುವ ಪಶು ಆಹಾರ ಸಂಸ್ಕರಣಾ ಘಟಕದಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ. 10 ಸಾವಿರ ಮೆಟ್ರಿಕ್ ಟನ್ ನೋಂದಣಿಗೆ ಮೇಲಧಿಕಾರಿಗಳಿಂದ ಆದೇಶವಿತ್ತು. 4137 ರೈತರು ಇದುವರೆಗೆ ನೋಂದಣಿ ಮಾಡಿಕೊಂಡಿದ್ದು ಪ್ರಕ್ರಿಯೆ ಮುಕ್ತಾಯವಾಗಿದೆ. ಹೊಸದಾಗಿ ಖರೀದಿಗೆ ಸೂಚನೆ ಬಂದಿಲ್ಲವೆಂದು ಉತ್ತರಿಸುತ್ತಿದ್ದಾರೆ. ಸರ್ಕಾರದ ಆದೇಶವಿದ್ದರೂ ಖರೀದಿಸದೆ ಇರುವ ಅಧಿಕಾರಿಗಳ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರ್ಷಿಕ 36 ಸಾವಿರ ಮೆಟ್ರಿಕ್ ಟನ್ ಸಾಕು: ಹಾಸನ ಪಶು ಆಹಾರ ಸಂಸ್ಕರಣಾ ಘಟಕದಲ್ಲಿ ನಿತ್ಯ 500 ಟನ್‌ನಂತೆ ಪಶು ಆಹಾರ ಸೇರಿ ಇತರ ಉಪ ಉತ್ಪನ್ನಗಳ ತಯಾರಿಸಲು ವಾರ್ಷಿಕ 36 ಸಾವಿರ ಮೆಟ್ರಿಕ್ ಟನ್ ಮೆಕ್ಕೆ ಜೋಳದ ಅವಶ್ಯಕತೆಯಿದೆ. ಘಟಕದಲ್ಲಿ ಈಗಾಗಲೇ 30 ಸಾವಿರ ಮೆ. ಟನ್ ಜೋಳ ದಾಸ್ತಾನಿದೆ. ಅದರ ಹೊರತಾಗಿ ಬೆಂಬಲ ಬೆಲೆಯಡಿ ಇನ್ನೂ 30 ಸಾವಿರ ಮೆ.ಟನ್ ಖರೀದಿಸುವಂತೆ ಒತ್ತಡ ಹೇರುತ್ತಿದ್ದು, ಅಷ್ಟು ಪ್ರಮಾಣದ ಜೋಳ ಪಡೆದು ಏನು ಮಾಡುವುದು? ಆದಾಗ್ಯೂ ಹೆಚ್ಚುವರಿಯಾಗಿ ಜೋಳ ಖರೀದಿಸಲು ಮೇಲಧಿಕಾರಿಗಳ ನಿರ್ದೇಶನವಿಲ್ಲವೆಂದು ಪಶು ಆಹಾರ ಘಟಕ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಿ ರಂಗನಾಥ್ ಅವರು ಪ್ರತಿಕ್ರಿಯಿಸಿದ್ದಾರೆ.
4,81,069 ಮೆ.ಟನ್ ಉತ್ಪಾದನೆ ಗುರಿ: ಜಿಲ್ಲೆಯು 2,29,974 ಹೆಕ್ಟೇರ್ ಕೃಷಿ ಭೂಮಿ ಹೊಂದಿದೆ. 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1,01,065 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಕೈಗೊಳ್ಳಲಾಗಿದೆ. ಹೈನುಗಾರಿಕೆ ಹಾಗೂ ಉತ್ತಮ ವಾತಾವರಣಕ್ಕೆ ಫಸಲು ಚೆನ್ನಾಗಿ ಬರುತ್ತದೆ. ಈ ಬಾರಿ 4,81,069 ಮೆಟ್ರಿಕ್ ಟನ್ ಉತ್ಪಾದನೆ ಗುರಿ ಹೊಂದಲಾಗಿದೆ. ಒಟ್ಟು ಉತ್ಪಾದನೆಯಲ್ಲಿ ಶೇ.5 ರಿಂದ 10ರಷ್ಟು ಮಾತ್ರ ಬೆಂಬಲ ಬೆಲೆಯಡಿ ಖರೀದಿಸಲು ಸಾಧ್ಯವಿದ್ದು ಅದರ ಪ್ರಮಾಣ ಹೆಚ್ಚಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ಕಳೆದ ತಿಂಗಳು ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘಟನೆಗಳ ಪದಾಧಿಕಾರಿಗಳು ನಿರಂತರ ಐದು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಬಳಿಕ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಸರ್ಕಾರಕ್ಕೆ ಪತ್ರ ಬರೆದು ಬೆಂಬಲ ಬೆಲೆ ಘೋಷಿಸುವಂತೆ ಮನವಿ ಮಾಡಿದ್ದರು. ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಫ್ರೂಟ್ಸ್ ಐಡಿ ಹೊಂದಿರುವ ಪ್ರತಿ ರೈತರಿಂದ 5 ಕ್ವಿಂಟಾಲ್ ಖರೀದಿಗೆ ಒಪ್ಪಿಗೆ ಸೂಚಿಸಿತ್ತು. ಆದರೆ, ರೈತರು ಖರೀದಿ ಪ್ರಮಾಣ ಹೆಚ್ಚಿಸಬೇಕು, ಇಲ್ಲವಾದರೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರಿಂದ ಡಿ.7ರಂದು 50 ಕ್ವಿಂಟಾಲ್ ಖರೀದಿಗೆ ಸಮ್ಮತಿ ಸೂಚಿಸಿದೆ. ಆದರೆ ಹಾಸನದಲ್ಲಿ ಮಾತ್ರ ಆದೇಶ ಪಾಲನೆಯಾಗುತ್ತಿಲ್ಲ.
ಡಿಸ್ಟಲರಿಗಳಿಗೆ ಆದೇಶ ಹೊರಡಿಸಿ: ಪಶು ಆಹಾರ ಘಟಕಗಳು ಮಾತ್ರವಲ್ಲದೆ ಡಿಸ್ಟಲರಿಗಳು ಮೆಕ್ಕೆಜೋಳ ಖರೀದಿಸಬೇಕಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಿದೆ. ನಫೆಡ್ ಮೂಲಕ ಪ್ರತಿ ಕ್ವಿಂಟಾಲ್‌ಗೆ 2,639 ರೂ. ದರದಲ್ಲಿ ಮೆಕ್ಕೆಜೋಳ ಖರೀದಿಗೆ ಡಿಸ್ಟಲರಿಗಳಿಗೆ ಆದೇಶ ಹೊರಡಿಸಬೇಕೆಂದು ಸಂಸದ ಶ್ರೇಯಸ್ ಪಟೇಲ್ ಅವರು ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹೋರಾಟದ ಎಚ್ಚರಿಕೆ: ಸರ್ಕಾರದ ನಿರ್ದೇಶನದಂತೆ ಪ್ರತಿ ರೈತರಿಂದ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿದ್ದು, ಕರ್ನಾಟಕ ಹಾಲು ಮಹಾಮಂಡಳಿ ನಿರ್ಲಕ್ಷೃ ತೋರಿದರೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆಂದು ಎಚ್ಚರಿಕೆ ನೀಡಿವೆ. ಸರ್ಕಾರದ ಆದೇಶಕ್ಕೂ ಬೆಲೆ ಇಲ್ಲವೆಂದರೆ ಅಧಿಕಾರಿಗಳು ಯಾರ ಮಾತು ಕೇಳುತ್ತಾರೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಪ್ರಶ್ನಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net