ವಿದ್ಯುತ್ ವಿತರಣೆ ಚಟುವಟಿಕೆ ಆರಂಭಿಸಲು ಅವಕಾಶ ಬೇಡ

ಕರ್ನಾಟಕ ವಿದ್ಯುತ್ ಮಂಡಳಿ ನೌಕರರ ಒಕ್ಕೂಟದ ನೌಕರರು ಶಾಸಕ ಎಚ್.ಕೆ.ಸುರೆಶ್ ಅವರಿಗೆ ಮನವಿ ಸಲ್ಲಿಸಿದರು. ನವಾಜ್‌ಖಾನ್, ಜಗದೀಶ್, ರಾಘವೇಂದ್ರ, ಮಂಜುನಾಥ್, ಚಂದ್ರಶೇಖರ್, ಚಂದ್ರಕಲಾ, ಪಾಲಾಕ್ಷ, ದ್ವಾರಕನಾಥ್ ಇದ್ದರು.
ಕರ್ನಾಟಕ ವಿದ್ಯುತ್ ಮಂಡಳಿ ನೌಕರರ ಒಕ್ಕೂಟದ ನೌಕರರು ಶಾಸಕ ಎಚ್.ಕೆ.ಸುರೆಶ್ ಅವರಿಗೆ ಮನವಿ ಸಲ್ಲಿಸಿದರು. ನವಾಜ್‌ಖಾನ್, ಜಗದೀಶ್, ರಾಘವೇಂದ್ರ, ಮಂಜುನಾಥ್, ಚಂದ್ರಶೇಖರ್, ಚಂದ್ರಕಲಾ, ಪಾಲಾಕ್ಷ, ದ್ವಾರಕನಾಥ್ ಇದ್ದರು.
Published on
ಬೇಲೂರು: ಟಾಟಾ ಪವರ್ ಕಂಪನಿ ಲಿಮಿಟೆಡ್ ರಾಜ್ಯದಲ್ಲಿ ವಿದ್ಯುತ್ ವಿತರಣೆ ಚಟುವಟಿಕೆ ಆರಂಭಿಸಲು ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಗೆ ಕರ್ನಾಟಕ ವಿದ್ಯುತ್ ಮಂಡಳಿ ನೌಕರರ ಒಕ್ಕೂಟ, ಸಂಘಗಳ ಒಕ್ಕೂಟ(ಹಾಸನ ವೃತ್ತ, ಸಕಲೇಶಪುರ ವಿಭಾಗ, ಬೇಲೂರು ಉಪವಿಭಾಗ) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಶಾಸಕ ಎಚ್.ಕೆ.ಸುರೇಶ್‌ಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದೆ.
ಕರ್ನಾಟಕ ವಿದ್ಯುತ್ ಮಂಡಳಿ ನೌಕರರ ಹಾಗೂ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ನವಾಜ್‌ಖಾನ್ ಮಾತನಾಡಿ, ಟಾಟಾ ಪವರ್ ಕಂಪನಿ ಪ್ರಸ್ತಾವನೆಯಿಂದ ಸಾರ್ವಜನಿಕರು, ರೈತರು ಹಾಗೂ ವಿದ್ಯುತ್ ನಿಗಮದ ನೌಕರರ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ. ಖಾಸಗಿ ಕಂಪನಿಗಳು ಲಾಭದ ಉದ್ದೇಶದಿಂದ ವಿದ್ಯುತ್ ದರ ಹೆಚ್ಚಿಸುವ ಸಾಧ್ಯತೆ ಇದ್ದು, ಗ್ರಾಮೀಣ ಪ್ರದೇಶಗಳ ವಿದ್ಯುತ್ ಸರಬರಾಜಿನ ಮೇಲೂ ಪರಿಣಾಮ ಬೀರಬಹುದು. ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳಲ್ಲಿ ದೊರೆಯುತ್ತಿರುವ ಉದ್ಯೋಗ ಭದ್ರತೆ, ಮೀಸಲಾತಿ ವ್ಯವಸ್ಥೆ ಹಾಗೂ ಸಾರ್ವಜನಿಕ ಜವಾಬ್ದಾರಿ ಖಾಸಗಿ ವಲಯದಲ್ಲಿರುವುದಿಲ್ಲ. ಇದರಿಂದ ಯುವಕರ ಉದ್ಯೋಗಾವಕಾಶಕ್ಕೂ ಹಿನ್ನಡೆಯಾಗಲಿದೆ ಎಂದರು.
ರೈತರಿಗೆ ನೀಡಲಾಗುತ್ತಿರುವ ಉಚಿತ ಹಾಗೂ ರಿಯಾಯಿತಿ ದರದ ವಿದ್ಯುತ್ ಯೋಜನೆಗೆ ಇದರಿಂದ ಧಕ್ಕೆಯಾಗುವ ಸಾಧ್ಯತೆ ಇದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ವಿದ್ಯುತ್ ಮೂಲಸೌಕರ್ಯವನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಕ್ರಮವನ್ನು ಮರು ಪರಿಶೀಲಿಸಬೇಕು. ಈ ಬಗ್ಗೆ ಶಾಸಕರು ನೌಕರರ ಪರವಾಗಿ ದನಿ ಎತ್ತಬೇಕೆಂದು ಶಾಸಕ ಎಚ್.ಕೆ.ಸುರೇಶ್ ಅವರ ಮೂಲಕ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳನ್ನು ರಕ್ಷಿಸಲು ಸಿಬ್ಬಂದಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿಸಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಹಾಗೂ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದರು.
ಕರ್ನಾಟಕ ವಿದ್ಯುತ್ ಮಂಡಳಿ ನೌಕರರ ಒಕ್ಕೂಟ, ಸಂಘಗಳ ಪದಾಧಿಕಾರಿಗಳಾದ ಜಗದೀಶ್, ರಾಘವೇಂದ್ರ, ಮಂಜುನಾಥ್, ಚಂದ್ರಶೇಖರ್, ಚಂದ್ರಕಲಾ, ಪಾಲಾಕ್ಷ, ದ್ವಾರಕನಾಥ್ ಸೇರಿದಂತೆ ನೌಕರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net