ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತ ಭಾರತೀಯ ಸೇನೆಗೆ ಆಯ್ಕೆಯಾಗಿ ತರಬೇತಿಗೆ ತೆರಳುತ್ತಿರುವ ಮಿಥುನ್‌ಗೆ ತಾಲೂಕು ಪತ್ರಕರ್ತರ ಸಂಘದಿಂದ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಬಿ.ಬಿ..ಶಿವರಾಜ್, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಕ್ಷ್ಮಣ್ ಇತರರು ಇದ್ದರು.
ಬೇಲೂರು: ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತ ಈಗ ಭಾರತೀಯ ಸೇನೆಗೆ ಆಯ್ಕೆಯಾಗಿ ತರಬೇತಿಗೆ ತೆರಳಿದ ಪಟ್ಟಣದ ಮಿಥುನ್‌ಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಸನ್ಮಾನಿಸಿ ಶುಭ ಹಾರೈಸಿ ಬೀಳ್ಕೊಡಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಶಿವರಾಜ್ ಮಾತನಾಡಿ, ಮನೆ ಮನೆಗೆ ಪತ್ರಿಕೆ ವಿತರಿಸುತ್ತಿದ್ದ ಯುವಕ ಭಾರತೀಯ ಸೇನೆಗೆ ಆಯ್ಕೆಯಾಗಿ ತರಬೇತಿಗೆ ತೆರಳುತ್ತಿರುವುದು ಬೇಲೂರಿನ ಜನತೆಗೆ ಹಾಗೂ ಪತ್ರಿಕಾ ವಿತರಕರ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಮಿಥುನ್ ಬಡ ಕುಟುಂಬದಲ್ಲಿ ಹುಟ್ಟಿ ಪತ್ರಿಕೆ ಹಂಚುತ್ತಲೇ ವಿದ್ಯಾಭ್ಯಾಸ ಮಾಡಿ ಈಗ ದೇಶ ಸೇವೆಗಾಗಿ ಸೇನೆಗೆ ಸೇರಿರುವುದು ಶ್ಲಾಘನೀಯ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಕ್ಷ್ಮಣ್ ಮಾತನಾಡಿ, ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ ಎಂದು ಶುಭ ಹಾರೈಸಿದರು.
ಜಿಲ್ಲಾ ನಿರ್ದೇಶಕ ಮಲ್ಲೇಶ್ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ದೇಶಭಕ್ತಿಯ ಮನೋಭಾವ ಬೆಳೆಸಿಕೊಳ್ಳಬೇಕು. ಪತ್ರಕರ್ತರ ಸಂಘವು ಯುವಜನರಲ್ಲಿ ದೇಶಭಕ್ತಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಇನ್ನಷ್ಟು ಹೆಚ್ಚಿಸಬೇಕು ಎಂದರು.
ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಿ.ಎಸ್.ಆರಾಧ್ಯ ಮಾತನಾಡಿ, ಪತ್ರಿಕೆ ವಿತರಣೆಯ ತೆಗೆ ವೆಲ್ಡಿಂಗ್ ಕೆಲಸ ಮಾಡುತ್ತಲೇ ಪರಿಶ್ರಮಪಟ್ಟು ಭಾರತೀಯ ಸೇನೆಗೆ ಸೇರಿದ್ದು, ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಉತ್ತಮ ಸೇವೆ ಸಲ್ಲಿಸಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಿಥುನ್, ದೇಶ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಅತ್ಯುನ್ನತ ಗೌರವ. ಶಿಸ್ತು, ಪ್ರಾಮಾಣಿಕತೆಯಿಂದ ದೇಶದ ರಕ್ಷಣೆಗೆ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಪತ್ರಕರ್ತರ ಸಂಘದ ಖಜಾಂಚಿ ಲೋಹಿತ್, ಕಾರ್ಯದರ್ಶಿ ಗಣೇಶ್, ಪೈಂಟ್ ರವಿ, ರವಿಹೊಳ್ಳ ನಾಗೇಶ್, ಸಂತೋಷ್, ಅರುಣ್ ಕುಮಾರ್, ರಮೇಶ್, ನಿಂಗರಾಜು, ಶ್ರೀಹರಿ, ದೀಪು ಸೇರಿದಂತೆ ಇತರರಿದ್ದರು.