ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎತ್ತಿನಹೊಳೆ ಯೋಜನೆಯಡಿ 1.80 ಕೋಟಿ ರೂ. ಅನುದಾನದಲ್ಲಿ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು.
ಸಕಲೇಶಪುರ: ರಾಜ್ಯ ಸರ್ಕಾರದಿಂದ ಲಭ್ಯವಾಗುತ್ತಿರುವ ಸೀಮಿತ ಅನುದಾನದಲ್ಲಿಯೇ ಅಗತ್ಯ ಪ್ರದೇಶಗಳಿಗೆ ಆದ್ಯತೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎತ್ತಿನಹೊಳೆ ಯೋಜನೆಯಡಿ 1.80 ಕೋಟಿ ರೂ. ಅನುದಾನದಲ್ಲಿ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟಳ್ಳಿ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣವಾಗಲಿರುವ ಕೊರಗಜ್ಜ ದೇವಾಲಯ ಸಂಪರ್ಕ ರಸ್ತೆ, ಗ್ರಾಮದಲ್ಲಿ ನಿರ್ಮಾಣವಾಗಲಿರುವ ಶ್ರೀ ಚೌಡೇಶ್ವರಿ ದೇವಿ ದೇವಾಲಯ ಕಾಮಗಾರಿ, ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಶಕಗಳ ಬೇಡಿಕೆಯಾಗಿದ್ದ ಹರಗರಹಳ್ಳಿ ದೀನಹಳ್ಳಿ ಸಂಪರ್ಕ ರಸ್ತೆ ನಿರ್ಮಾಣ ಹಾಗೂ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಮನೆ ಮುಖ್ಯ ರಸ್ತೆಯಿಂದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಹರಗರಹಳ್ಳಿದೀನಹಳ್ಳಿ ಸಂಪರ್ಕ ರಸ್ತೆ ಕಾಮಗಾರಿಗೆ 85 ಲಕ್ಷ ರೂ. ಹಾಗೂ ಬೊಮ್ಮನಮನೆ ಮುಖ್ಯ ರಸ್ತೆ, ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ರಸ್ತೆ, ಕಾಮಗಾರಿಗೆ 95 ಲಕ್ಷ ರೂ. ಸೇರಿದಂತೆ ಒಟ್ಟು 1.80 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದ ಗ್ರಾಮಗಳಿಗೆ ದಶಕಗಳ ನಂತರ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆಯಿಂದ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಕ್ಷೇತ್ರಕ್ಕೆ ಮೀಸಲಿದ್ದ ಮಳೆ ಪರಿಹಾರ ಅನುದಾನವನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿರುವುದರಿಂದ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಮೀಸಲಿರುವ ಅನುದಾನವನ್ನು ಹೆಚ್ಚಿಸುವುದರ ಜತೆಗೆ ವರ್ಗಾವಣೆಗೊಂಡ ಅನುದಾನವನ್ನು ಹಿಂತಿರುಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರೋಷನ್, ರೇಣುಕ್, ಪ್ರಮುಖರಾದ ಪುಟ್ಟಣ್ಣ, ಇಂದ್ರಶೇಖರ್, ಸೋಮಯ್ಯ, ಪಾಲಾಕ್ಷ, ವಕೀಲರ ಸಂಘದ ಅಧ್ಯಕ್ಷ ಯಶ್ವಂತ್, ಪತ್ರಕರ್ತರಾದ ಕುಶ್ವಂತ್, ಚೇತನ ಹರಗಹಳ್ಳಿ ಸೇರಿದಂತೆ ಬಿಜೆಪಿ ಮುಖಂಡರು, ಗ್ರಾಮಸ್ಥರು ಇದ್ದರು.