ಅನ್ಯಾಯವಾಗಿ ನನ್ನ ಹೆಸರು ಆರೋಪಿ ಪಟ್ಟಿಯಲ್ಲಿ ಸೇರ್ಪಡೆ

ದೇವರಾಜೇಗೌಡ
ದೇವರಾಜೇಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಅನ್ಯಾಯವಾಗಿ ನನ್ನ ಹೆಸರು ಆರೋಪಿ ಪಟ್ಟಿಯಲ್ಲಿ ಸೇರ್ಪಡೆ
  • ಬಿಜೆಪಿ ಮುಖಂಡ ದೇವರಾಜೇಗೌಡ ಆಕ್ರೋಶ
  • ಪೆನ್‌ಡ್ರೈವ್ ಹಂಚಿಕೆ ಪ್ರಕರಣ
ಹಾಸನ: ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರಿರುವುದಕ್ಕೆ ಬಿಜೆಪಿ ಮುಖಂಡ ದೇವರಾಜೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಅನ್ಯಾಯವಾಗಿ ಆರೋಪಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿರುವ ವಿಚಾರವಾಗಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ ಪ್ರಕರಣ ಇದಾಗಿದೆ ಎಂದರು.
ಇದರಲ್ಲಿ ಡಿ.ಕೆ.ಶಿವಕುಮಾರ್ ಮೊದಲನೆಯವರಾಗಿದ್ದರು. ಖಾಸಗಿ ಚಾನಲ್‌ಗೆ ಪೆನ್‌ಡ್ರೈವ್ ಹೇಗೆ ತಲುಪಿತು ಎಂಬುದರ ಕುರಿತು ಯಾರೂ ಪ್ರಶ್ನಿಸಿಲ್ಲ. ಹಾಸನದಲ್ಲಿ ಪೆನ್‌ಡ್ರೈವ್ ಹಂಚಿಕೆ ಬಗ್ಗೆ ಎಲ್.ಆರ್.ಶಿವರಾಮೇಗೌಡ ಮಾತನಾಡಿದ ಆಡಿಯೋ ವೈರಲ್ ಆಗಿದ್ದರೂ, ತನಿಖೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದರೂ ಒಂದು ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ನಡೆದಿದೆ. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಮುಂದೆ ತಲೆಬಾಗಬೇಕು, ಶಿಕ್ಷೆ ಅನುಭವಿಸಬೇಕು ಎಂದರು.
ನನ್ನಿಂದ ಯಾರಿಗಾದರೂ ಪೆನ್‌ಡ್ರೈವ್ ಅಥವಾ ವಿಡಿಯೋ ಹೋಗಿದ್ದರೆ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಅವರು, ನನ್ನ ಮೊಬೈಲ್, ಕಂಪ್ಯೂಟರ್ ವಶಕ್ಕೆ ಪಡೆದಿರುವುದರಿಂದ ಅದರಲ್ಲಿ ಏನನ್ನಾದರೂ ಸೇರಿಸುವ ಸಾಧ್ಯತೆ ಇದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಕಾರ್ತಿಕ್‌ಗೌಡ ಕಿಂಗ್‌ಪಿನ್. ಪ್ರಮುಖ ಆರೋಪಿಗಳ ಪಟ್ಟಿಯಲ್ಲಿ ಪ್ರೀತಂಗೌಡ ಸೇರಿದಂತೆ ಕೆಲವರ ಹೆಸರು ಕಾಣೆಯಾಗಿವೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಪೆನ್‌ಡ್ರೈವ್ ಹಂಚಿಕೆ ನಡೆದ ಮಾಹಿತಿ ಇದ್ದರೂ ಆ ಸ್ಥಳವನ್ನು ಕಸ್ಟಡಿಗೆ ಪಡೆಯಲಿಲ್ಲ ಎಂದು ಟೀಕಿಸಿದರು.
ಇದಲ್ಲದೆ, ಸಂಸದ ಶ್ರೇಯಸ್ ಪಟೇಲ್ ಅವರಿಗೆ ನೋಟಿಸ್ ನೀಡದಿರುವುದು, ಅಂದಿನ ಎಸ್‌ಪಿ ಮಹಮ್ಮದ್ ಸುಜೀತಾ ಅವರ ಪಾತ್ರದ ಕುರಿತು ತನಿಖೆ ನಡೆಸದಿರುವುದು ಅನುಮಾನ ಮೂಡಿಸಿದೆ. ತನಿಖೆ ನಡೆಸಿದ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಪ್ರಭಾವದಲ್ಲಿ ಕೆಲಸ ಮಾಡಿದ್ದಾರೆ. ನಿಜವಾಗಿ ಪೆನ್‌ಡ್ರೈವ್ ಹಂಚಿಕೆ ಮಾಡಿದವರ ಹೆಸರು ಚಾರ್ಜ್‌ಶೀಟ್‌ನಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ, ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧವೇ ತನಿಖೆ ನಡೆಸುವಂತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net