ಸೋಂಪುರ ಗ್ರಾಮ ಸಮೀಪ ಶ್ರೀ ಸಿದ್ಧರಾಮೇಶ್ವರ ಭೋವಿ ಸಮುದಾಯ ಭವನ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ರಂಗನಾಥ್, ಪರಮೇಶ್, ಶ್ರೀಧರ್ ಕಂಕನವಾಡಿ, ಕೃಷ್ಣೇಗೌಡ, ಮಹೇಶ್, ರಮೇಶ್, ರಾಮಾಭೋವಿ, ದೇವರಾಜು ಇದ್ದರು.
ಬೇಲೂರು: ತಾಲೂಕು ಭೋವಿ ಸಮಾಜದವರ ಅನುಕೂಲಕ್ಕಾಗಿ ತಾಲೂಕಿನ ಸೋಂಪುರ ಗ್ರಾಮದ ಸಮೀಪ ಶ್ರೀ ಸಿದ್ಧರಾಮೇಶ್ವರ ಭೋವಿ ಸಮುದಾಯ ಭವನ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಶುಕ್ರವಾರ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಭೋವಿ ಸಮಾಜದ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಸಿದ್ಧರಾಮೇಶ್ವರ ಭೋವಿ ಸಮುದಾಯ ಭವನಕ್ಕೆ ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಭೋವಿ ಸಮುದಾಯಕ್ಕೆ ಒಂದು ಭವನ ಬೇಕೆಂಬ ನಿಟ್ಟಿನಲ್ಲಿ ಮುಖಂಡರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಾಗ ಗುರುತಿಸಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ 1 ಕೋಟಿ ರೂ. ಅನುದಾನ ತಂದು ಕೆಲಸ ಮಾಡಿಸಲಾಗುತ್ತಿದೆ ಎಂದರು.
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಭವನ ಮತ್ತು ಜನ ಸಾಮಾನ್ಯರಿಗೆ ಅನುಕೂಲವಾಗುಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು. ಭೋವಿ ಸಮುದಾಯ ಮೊದಲಿನಿಂದಲೂ ನನ್ನೊಟ್ಟಿಗೆ ಇದ್ದರೂ ಏನನ್ನೂ ಕೇಳಿರಲಿಲ್ಲ. ಮುಂದೆ ಭೋವಿ ಸಮಾಜಕ್ಕೆ ಹೆಚ್ಚಿನ ಕೆಲಸಗಳನ್ನು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ರಂಗನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ಭವನಕ್ಕೆ ಬೇಕಾದ ಮೂಲ ಸೌಕರ್ಯ ಮತ್ತು ಹೆಚ್ಚಿನ ಕೆಲಸಗಳನ್ನು ಶಾಸಕರು ಮಾಡಿಕೊಡುವ ಭರವಸೆ ಇದೆ ಎಂದರು.
ಭೋವಿ ಸಮಾಜದ ತಾಲೂಕು ಅಧ್ಯಕ್ಷ ಪರಮೇಶ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗ್ರೇಡ್-1 ಲಿಂಗರಾಜು, ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ, ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣೇಗೌಡ, ಭೋವಿ ಸಮಾಜದ ಮುಖಂಡರಾದ ಮಹೇಶ್, ರಮೇಶ್, ರಾಮಾಭೋವಿ, ದೇವರಾಜು ಇತರರಿದ್ದರು.