ಬೇಲೂರು ಪಟ್ಟಣ ಸಮೀಪದ ಹೊಯ್ಸಳ ಕ್ರೀಡಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ತಾಯಿಯವರ ಹೆಸರಿನಲ್ಲಿ ಶಾಸಕ ಎಚ್.ಕೆ.ಸುರೇಶ್ ಗಿಡ ನೆಟ್ಟರು. ಎಸಿಎ್ ಮೋಹನ್ ಕುಮಾರ್, ಶ್ರೀಧರ್ ಕಂಕನವಾಡಿ ಇತರರು ಇದ್ದರು.
ಬೇಲೂರು: ಪರಿಸರ ದಿನಾಚರಣೆ ಹೆಸರಲ್ಲಿ ಒಂದು ದಿನ ಗಿಡ ನೆಟ್ಟು ಹೋದರೆ ಸಾಲದು, ಅದನ್ನು ಪೋಷಿಸಿ ಬೆಳೆಸಬೇಕು. ನಾನು ಇಂದು ನಮ್ಮ ತಾಯಿ ಸಾಕಮ್ಮನವರ ಹೆಸರಲ್ಲಿ ಗಿಡ ನೆಟ್ಟಿದ್ದು, ಇದರ ಪೋಷಣೆ ಮಾಡುವೆ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯಿಂದ ಪಟ್ಟಣ ಸಮೀಪದ ಹೊಯ್ಸಳ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಮ್ಮತಾಯಿ ಹೆಸರಿನಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು.
ಎಲ್ಲರೂ ತಮ್ಮ ಪ್ರೀತಿ ಪಾತ್ರರ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟು ಪೋಷಣೆ ಮಾಡಿದರೆ ನಮ್ಮ ಸುತ್ತಲೂ ಹಸಿರು ವಾತಾವರಣವನ್ನು ಸೃಷ್ಟಿ ಮಾಡಬಹುದು. ವಿದ್ಯಾರ್ಥಿಗಳು, ಅಧಿಕಾರಿ ಮತ್ತು ಸಿಬ್ಬಂದಿ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಹಾಸನ ಎಸಿಎಫ್ ಮೋಹನ್ ಕುಮಾರ್ ಮಾತನಾಡಿ, ಶಾಸಕರು ತಮ್ಮ ತಾಯಿಯವರ ಹೆಸರಲ್ಲಿ ಗಿಡ ನೆಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರಂತೆ ಎಲ್ಲರೂ ಗಿಡಗಳನ್ನು ನೆಟ್ಟು ಪೋಷಿಸಲು ಮುಂದಾಗಬೇಕು. ಜತೆಗೆ ಇಲ್ಲಿನ ಹೊಯ್ಸಳ ಕ್ರೀಡಾಂಗಣದಲ್ಲಿ 150ಕ್ಕೂ ಹೆಚ್ಚು ಗಿಡಗಳನ್ನು ನೆಡುತ್ತಿದ್ದು, ತಾಲೂಕಿನಲ್ಲಿ ಒಂದೂವರೆ ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಿದ್ದೇವೆ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ವಲಯ ಅರಣ್ಯಾಧಿಕಾರಿ ಯತೀಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಶೈಲಾ, ಮುರಾರ್ಜಿ ವಸತಿ ಶಾಲೆ ಪ್ರಾಂಶುಪಾಲೆ ಹೇಮಾವತಿ, ವ್ಯವಸ್ಥಾಪಕ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.