ರಾಜ್ಯದ ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟದ ಕುರಿತು ವಿಧಾನಸಭೆ ಕಲಾಪದಲ್ಲಿ ಮಂಗಳವಾರ ಗಂಭೀರ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕ ಎ.ಮಂಜು ಅವರು, ತಂಬಾಕಿಗೆ ತಕ್ಷಣವೇ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ರಾಜ್ಯದಲ್ಲಿ ತಂಬಾಕು ಬೆಳೆಗಾರರು ಕೆಲ ತಿಂಗಳಿಂದ ಗಂಭೀರ ಸಂಕಷ್ಟ ಎದುರಿಸುತ್ತಿದ್ದಾರೆ. ಹೊಗಸೊಪ್ಪಿಗೆ ಸಮರ್ಪಕ ಮಾರುಕಟ್ಟೆ ಬೆಲೆ ಸಿಗದೆ ಸುಮಾರು 53 ಸಾವಿರಕ್ಕೂ ಹೆಚ್ಚು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ಸಾಗಿಸುವುದೆ ಕಷ್ಟಕರವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗೆ ಮಾಡಿದ ವೆಚ್ಚವನ್ನೇ ವಾಪಸ್ ಪಡೆಯಲು ಸಾಧ್ಯವಾಗದೆ, ಸಾಲದ ಹೊರೆ ಹೆಚ್ಚುತ್ತಿರುವುದರಿಂದ ಅನೇಕ ರೈತರು ಆತಂಕದಲ್ಲಿದ್ದಾರೆ ಎಂದರು.