ಅರಸೀಕೆರೆ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಮಾನಸಿಕ ಏಕಾಗ್ರತೆ ಅಗತ್ಯ ಎಂದು ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುಬ್ರಹ್ಮಣ್ಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯದ ಕಾಳಜಿ, ಶಿಸ್ತುಬದ್ಧ ಜೀವನ ಹಾಗೂ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ. ಸದೃಢ ದೇಹಕ್ಕೆ ಗಟ್ಟಿ ಮನಸ್ಸು ಅಗತ್ಯವಾಗಿದ್ದು ಮನಸ್ಸು ಚಂಚಲಗೊಳ್ಳದಂತೆ ಏಕಾಗ್ರತೆ ಕಾಪಾಡಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯವಿದೆ ಎಂದರು.
ಪ್ರೌಢಶಾಲಾ ಶಿಕ್ಷಣ ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ವದ ತಿರುವಿನ ಹಂತವಾಗಿದೆ. ಭವಿಷ್ಯದ ಗುರಿಯತ್ತ ಸಾಗಬೇಕು. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಪಾಲಕರು, ಶಿಕ್ಷಕರ ಸಲಹೆ ಪಡೆಯಿರಿ ಎಂದು ಸಲಹೆ ನೀಡಿದರು.
ಉಪಪ್ರಾಂಶುಪಾಲ ಪಾಲಾಕ್ಷ ಮೂರ್ತಿ ಮಾತನಾಡಿದರು. ಶಿಕ್ಷಕರಾದ ಶಶಿಕಲಾ, ನಯನಾ, ಸೇವಾ ಪ್ರತಿನಿಧಿ ಚಂದ್ರಕಲಾ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.