ಪಟ್ಟಣದ ಸಮಸ್ಯೆ ಬಗೆಹರಿಸಲು ಸದಸ್ಯರ ಒತ್ತಾಯ

ಬೇಲೂರು ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಆಯೋಜಿಸಿದ್ದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿದರು. ಎ.ಆರ್.ಅಶೋಕ್, ಬಸವರಾಜ್ ಸಿಗ್ಗಾವಿ, ಉಷಾ ಸತೀಶ್, ಲೋಹಿತ್ ಇದ್ದರು.
ಬೇಲೂರು ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಆಯೋಜಿಸಿದ್ದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿದರು. ಎ.ಆರ್.ಅಶೋಕ್, ಬಸವರಾಜ್ ಸಿಗ್ಗಾವಿ, ಉಷಾ ಸತೀಶ್, ಲೋಹಿತ್ ಇದ್ದರು.
Published on
ಬೇಲೂರು: ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಅಧ್ಯಕ್ಷ ಅಕ್ರಂ ಷರೀಫ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತುರ್ತು ಸಭೆಯಲ್ಲಿ, ಪುರಸಭೆಯಲ್ಲಿನ ಆಡಳಿತಾತ್ಮಕ ವಿಚಾರಗಳು, ಅಭಿವೃದ್ಧಿ ಕಾಮಗಾರಿ, ಸಾರ್ವಜನಿಕ ಮೂಲಸೌಕರ್ಯ ನಿರ್ವಹಣೆ ಹಾಗೂ ವಿವಿಧ ವಾರ್ಡ್‌ಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಸದಸ್ಯರು ಒತ್ತಾಯಿಸಿದರು.
ಸದಸ್ಯ ಎ.ಆರ್.ಅಶೋಕ್, ಕಚೇರಿಯ ನಿರ್ವಹಣೆ ಕೊರತೆ, ಪುರಸಭೆ ಆಸ್ತಿಗಳ ಒತ್ತುವರಿ ಹಾಗೂ ಸಾರ್ವಜನಿಕ ಸೌಲಭ್ಯಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಂಪ್ಯೂಟರ್ ಕೊಠಡಿಯ ಛಾವಣಿ ಸೋರುತ್ತಿದ್ದು, ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ. ಶೌಚಗೃಹಗಳ ನಿರ್ವಹಣೆ ಸಮರ್ಪಕವಾಗಿಲ್ಲ, ಸಭಾಂಗಣದ ಕಿಟಕಿಗಳ ಗಾಜುಗಳು ಒಡೆದಿದ್ದರೂ ದುರಸ್ತಿ ಮಾಡಿಲ್ಲ. ಪುರಸಭೆಗೆ ಸೇರಿದ ಹರ್ಡಿಕರ್ ವೃತ್ತ, ಹೊಳೆಬೀದಿ, ಪೋಸ್ಟ್ ಆಫೀಸ್ ರಸ್ತೆಯ ಹಿಂಭಾಗ ಹಾಗೂ ಯಗಚಿ ಸೇತುವೆ ಕೆಳಭಾಗದ ಜಾಗಗಳನ್ನು ಗುರುತಿಸಿ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಸೂಕ್ತವಾದ ಹಿಂದೂ ರುದ್ರಭೂಮಿ ಇಲ್ಲ. ಒತ್ತುವರಿ ತೆರವುಗೊಳಿಸಿ ಜಾಗ ಮೀಸಲಿಡಬೇಕು. 13ನೇ ವಾರ್ಡ್‌ನಲ್ಲಿ ಶಿಥಿಲವಾಗಿರುವ ಅಂಗನವಾಡಿ ಕಟ್ಟಡವನ್ನು ತಕ್ಷಣ ನವೀಕರಿಸುವಂತೆ ಒತ್ತಾಯಿಸಿದರು.
ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ನಮ್ಮ ವಾರ್ಡ್ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ವೀರಶೈವ ಸಮುದಾಯದ ರುದ್ರಭೂಮಿಯಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಕೊರತೆ ಇದ್ದು, ಪೈಪ್ ಅಳವಡಿಕೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಬೇಕಿದೆ ಎಂದರು.
ಇದೇ ವೇಳೆ ಇಂಜಿನಿಯರ್‌ಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಸದಸ್ಯರ ಮನವಿಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, 16ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಸ್ಮಶಾನ ಅಭಿವೃದ್ಧಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು 16ನೇ ಹಣಕಾಸು ಯೋಜನೆಯಡಿ ಕೈಗೊಳ್ಳಲು ಕ್ರಮ ವಹಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕ್ರಂ ಷರೀಫ್, 16ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ನಿಯಮಾವಳಿಗಳ ಪ್ರಕಾರ ಶೇ.30ರಷ್ಟು ಅನುದಾನವನ್ನು ನೀರು ಸರಬರಾಜು ಯೋಜನೆಗಳಿಗೆ, ಶೇ.30ರಷ್ಟು ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆ ಹಾಗೂ ಕಸ ವಿಲೇವಾರಿ ಕಾರ್ಯಗಳಿಗೆ ಮೀಸಲಿಡಲಾಗುತ್ತದೆ. ಉಳಿದ ಅನುದಾನವನ್ನು ವಿವಿಧ ವಾರ್ಡ್‌ಗಳ ಅಭಿವೃದ್ಧಿಗೆ ಹಂಚಿಕೆ ಮಾಡುವ ಕುರಿತು ಚರ್ಚಿಸಲಾಗಿದೆ ಎಂಧರು.
ಹರ್ಡಿಕರ್ ವೃತ್ತದ ಬಳಿ ಪುರಸಭೆಗೆ ಸೇರಿದ ಜಾಗದ ವಿವಾದ ಕುರಿತು ಪ್ರತಿಕ್ರಿಯಿಸಿ, ಸುಮಾರು 3,460 ಚದರ ಅಡಿ ಜಾಗವನ್ನು ಗುರುತಿಸಿ ಅಳತೆ ಕಾರ್ಯ ಪೂರ್ಣಗೊಳಿಸಿ ಬೇಲಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪುರಸಭೆ ಆಸ್ತಿಗಳ ಸಂರಕ್ಷಣೆ ಆಡಳಿತದ ಪ್ರಮುಖ ಆದ್ಯತೆಯಾಗಿದ್ದು, ಒತ್ತುವರಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಉಷಾ ಸತೀಶ್, ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಆರೋಗ್ಯಾಧಿಕಾರಿ ಲೋಹಿತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net