ಬೇಲೂರು: ಹಾಸನ ಜಿಲ್ಲಾ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ ಪುರಸಭೆ ಸದಸ್ಯರಾದ ಕಾಂಗ್ರೆಸ್‌ನ ಮೀನಾಕ್ಷಿ ವೆಂಕಟೇಶ್ ಹಾಗೂ ಜೆಡಿಎಸ್‌ನ ಶ್ರೀನಿವಾಸ್ ಆಯ್ಕೆಯಾದರು.
ಬೇಲೂರು ಪುರಸಭೆಯ ಇಬ್ಬರು ಸದಸ್ಯರಿಗೆ ಅವಕಾಶ ಇತ್ತು. ಆದರೆ ಎರಡು ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮೀನಾಕ್ಷಿ ವೆಂಕಟೇಶ್ ಹಾಗೂ ಜಮಾಲೂದ್ದೀನ್ ಮತ್ತು ಜೆಡಿಎಸ್‌ನಿಂದ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.
ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದ 17 ಸದಸ್ಯರು, ಜೆಡಿಎಸ್‌ನ 5 ಸದಸ್ಯರು ಹಾಗೂ ಬಿಜೆಪಿ ಒಬ್ಬ ಸದಸ್ಯರು ಇದ್ದಾರೆ. ಎಲ್ಲ ಸದಸ್ಯರಿಗೂ ತಲಾ ಎರಡು ಮತ ಚಲಾಯಿಸಲು ಅವಕಾಶವಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೀನಾಕ್ಷಿ ವೆಂಕಟೇಶ್ 16 ಮತಗಳು, ಜಮಾಲೂದ್ದೀನ್ 10 ಮತಗಳನ್ನು ಪಡೆದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶ್ರೀನಿವಾಸ್ 11 ಮತಗಳನ್ನು ಪಡೆದರು. ಕಾಂಗ್ರೆಸ್ ಪಕ್ಷದ 17 ಸದಸ್ಯರಿದ್ದರೂ ಜಮಾಲೂದ್ದೀನ್ ಸೋಲುಂಡಿದ್ದಾರೆ.
ಜೆಡಿಎಸ್ ಸದಸ್ಯರು ಹಾಗೂ ಮುಖಂಡರು ಬೇಲೂರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಚನ್ನಕೇಶವ, ಸದಸ್ಯರಾದ ಜಗದೀಶ್, ಪ್ರಭಾಕರ್, ಜೆಡಿಎಸ್ ಮುಖಂಡರಾದ ಬಿಟ್ರುವಳ್ಳಿ ಉಮೇಶ್, ಸತೀಶ್, ಚಂದ್ರು, ಶೇಖರ್, ವತ್ಸ ಇತರರಿದ್ದರು.