ರೈತಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಎಂಡಿಎನ್

ಅರಕಲಗೂಡಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮ ದಿನಾಚರಣೆ ಹಾಗೂ ರೈತ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಉದ್ಘಾಟಿಸಿದರು. ಮಂಜುನಾಥ್ ದತ್ತ, ಕಣಗಾಲು ಮೂರ್ತಿ, ಪ್ರಕಾಶ್, ಭುವನೇಶ್, ಹೊಂಬೇಗೌಡ, ನಿಂಗೇಗೌಡ ಇತರರಿದ್ದರು.
ಅರಕಲಗೂಡಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮ ದಿನಾಚರಣೆ ಹಾಗೂ ರೈತ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಉದ್ಘಾಟಿಸಿದರು. ಮಂಜುನಾಥ್ ದತ್ತ, ಕಣಗಾಲು ಮೂರ್ತಿ, ಪ್ರಕಾಶ್, ಭುವನೇಶ್, ಹೊಂಬೇಗೌಡ, ನಿಂಗೇಗೌಡ ಇತರರಿದ್ದರು.
Published on
ಅರಕಲಗೂಡು: ರೈತ ಸಂಘಟನೆ ರೈತನ ಆತ್ಮಗೌರವದ ಸಂಕೇತ. ಸಂಘಟನೆ ಸಂಕಷ್ಟದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸಬೇಕು. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕು ಎಂದು ರೈತ ಸಂಘದ ಹಿರಿಯ ಹೋರಾಟಗಾರ ಎಸ್.ಎನ್.ಮಂಜುನಾಥದತ್ತ ತಿಳಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮ ದಿನಾಚರಣೆ ಹಾಗೂ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ. ರಾಮಮನೋಹರ ಲೋಹಿಯಾ ಅವರ ನೇರ ಶಿಷ್ಯರಾಗಿದ್ದ ನಂಜುಂಡಸ್ವಾಮಿ ರಾಜ್ಯದಲ್ಲಿ ಸಮಾಜವಾದಿ ಸಿದ್ಧಾಂತಕ್ಕೆ ರೈತ ಚಳವಳಿಯ ಮೂಲಕ ಹೊಸ ಆಯಾಮ ನೀಡಿದರು. 50 ವರ್ಷಗಳ ಹಿಂದೆಯೇ ಶಿವಮೊಗ್ಗದಲ್ಲಿ ಕಬ್ಬು ಬೆಳೆಗಾರರ ಹೋರಾಟದ ಮೂಲಕ ರೈತ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದರು. ಅಂದು ಜಿಲ್ಲಾಧಿಕಾರಿ ಮನೆಯನ್ನೇ ಜಪ್ತಿ ಮಾಡಲು ಮುಂದಾದ ಅವರ ಧೈರ್ಯ ಇಂದಿನ ಹೋರಾಟಗಾರರಿಗೆ ಸ್ಫೂರ್ತಿಯಾಗಬೇಕು ಎಂದರು.
ನಂಜುಂಡಸ್ವಾಮಿ ರಾಜಕೀಯ ಪಕ್ಷಗಳನ್ನು ಕುಷ್ಠರೋಗದ ಸಂಸ್ಥೆಗಳು ಎಂದು ಕರೆಯುತ್ತಿದ್ದರು. ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಬಲಿಕೊಟ್ಟು, ಯಾವ ಪಕ್ಷ ಅಧಿಕಾರದಲ್ಲಿದೆಯೋ ಅದರ ಹಿಂದೆ ಹೋಗುವ ಇಂದಿನ ಸಮಾಜವಾದಿಗಳ ಎಡಬಿಡಂಗಿ ನಡೆ ನಾಚಿಕೆಗೇಡಿನ ಸಂಗತಿ. ಸಂಘಟನೆಯು ಎಂದಿಗೂ ತನ್ನ ಸ್ವಾಯತ್ತವನ್ನು ಕಾಪಾಡಿಕೊಳ್ಳಬೇಕು. ಶಿಸ್ತು ಮತ್ತು ಪ್ರಾಮಾಣಿಕತೆಯೇ ಸಂಘಟನೆ ಜೀವಾಳ. ತಾಲೂಕಿನಲ್ಲಿ ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಬಡವರು ಮತ್ತು ದಲಿತರ ಮನೆ ಬಾಗಿಲಿಗೆ ಹೋಗಿ ಎಲ್ಲರನ್ನೂ ಒಗ್ಗೂಡಿಸುವತ್ತ ಗಮನ ಹರಿಸಿ, ಸಂಘಟನೆಗೆ ಹೊಸ ರಕ್ತ ಮತ್ತು ಆಧುನಿಕ ಆಲೋಚನೆಗಳನ್ನು ತರಲು ವಿದ್ಯಾವಂತ ಯುವಕರನ್ನು ಮುನ್ನೆಲೆಗೆ ತರುವುದು ಅಗತ್ಯ. ಇಲ್ಲಿ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಹಿರಿಯರಾದ ಮರವಳಲು ನಿಂಗೇಗೌಡ, ರೈತ ಚಳವಳಿಯ ಹಿರಿಯ ಹೋರಾಟಗಾರ ದಿ. ಹೊ.ತಿ. ಹುಚ್ಚಪ್ಪ ಅವರ ನೆಲದಲ್ಲಿ ಪ್ರತಿ ಹಳ್ಳಿಯಲ್ಲೂ ಸಂಘಟನೆ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಕೆ.ಸಿ.ಸೌಮ್ಯಾ, ರೈತರು ಸ್ವಾವಲಂಬಿಗಳಾಗಬೇಕು. ರೈತರು ಸರ್ಕಾರವನ್ನು ಬೇಡಬಾರದು, ಸರ್ಕಾರವೇ ಅನ್ನದಾತರನ್ನು ಬೇಡುವಂತಾಗಬೇಕು ಎನ್ನುವ ಆಶಯ ಹೊಂದಿದ್ದ ಪ್ರೊ. ನಂಜುಂಡಸ್ವಾಮಿ ಅವರ ದೂರದೃಷ್ಟಿ ಚಿಂತನೆ ಸ್ಫೂರ್ತಿದಾಯಕವಾದುದು ಎಂದರು.
ದೊಡ್ಡಮಠದ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಣಗಾಲ್ ಮೂರ್ತಿ, ಬೇಲೂರು ತಾಲೂಕುವ ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಎಚ್. ಎಚ್. ಭುವನೇಶ್ ಮಾತನಾಡಿದರು.
ಜಿಲ್ಲಾ ಅಧ್ಯಕ್ಷೀಯ ಮಂಡಳಿ ಸದಸ್ಯ ಪ್ರಕಾಶ್, ತಾಲೂಕು ಘಟಕದ ಮಾಜಿ ಅಧ್ಯಕ್ಷ ಹುಲ್ಲಂಗಾಲ ಹೊಂಬೇಗೌಡ, ಮುಖಂಡರಾದ ಎಚ್. ಇ.ಜಗದೀಶ್, ಬಾಲಣ್ಣ, ಬಸವರಾಜ್, ಚಲವರಾಜೇಅರಸ್, ಪುರುಷೋತ್ತಮ ಗೌಡ, ದೇವರಾಜು, ರಮೇಶ್, ಚಂದ್ರು, ಲೋಕೇಶ್, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಅತ್ನಿ ಹರೀಶ್, ಮರವಳಲು ನಿಂಗೇಗೌಡ ಇತರರಿದ್ದರು.
ಕಾರ್ಯಕ್ರಮದಲ್ಲಿ ಸರೋಜಮ್ಮ ಹೊ.ತಿ. ಹುಚ್ಚಪ್ಪ ಅವರನ್ನು ಗೌರವಿಸಲಾಯಿತು. ಗ್ಯಾರಂಟಿ ರಾಮಣ್ಣ ಮತ್ತು ಸಂಗಡಿಗರು ರೈತ ಗೀತೆಗಳ ಗಾಯನ ನಡೆಸಿದರು. ಅನಕೃ ವೃತ್ತದಿಂದ ಕಾರ್ಯಕ್ರಮದ ವೇದಿಕೆವರೆಗೆ ಮೆರವಣಿಗೆ ನಡೆಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net