

ಆಲೂರು: ಬರ ಪರಿಹಾರ ಯೋಜನೆ ಭಾಗವಾಗಿ ರೈತರಿಗೆ ಉಚಿತವಾಗಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಮೇವು ಬೀಜಗಳ ಕಿಟ್ಗಳನ್ನು ವಿತರಿಸಲಾಗುತ್ತಿದ್ದು, ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೇವಿನ ಬೀಜ ಮಿನಿ ಕಿಟ್ಸ್ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ಮೇವಿನ ಬಿಜ ವಿತರಿಸಿ ಮಾತನಾಡಿದರು.
ಆಲೂರು ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿರುವುದರಿಂದ, ರೈತರು ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯೂ ಒಂದಾಗಿದೆ. ಜಾನುವಾರುಗಳ ಹಸಿವು ನೀಗಿಸಲು ಮತ್ತು ಅವುಗಳ ಆರೋಗ್ಯ ಸಂರಕ್ಷಣೆಗೆ ಸರ್ಕಾರದಿಂದ ಸಂಬಂಧಿಸಿದ ಇಲಾಖೆಗಳ ಮೂಲಕ ಆದ್ಯತೆ ಮೇಲೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರು ತಮ್ಮ ಬಳಿ ಲಭ್ಯವಿರುವ ಕನಿಷ್ಠ ನೀರಾವರಿ ಸೌಲಭ್ಯ ಬಳಸಿಕೊಂಡು ಸ್ವತಃ ಮೇವು ಬೆಳೆದುಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರ ಹಲವು ಮನವಿಗಳ ಒತ್ತಾಯ ಮೇರೆಗೆ ಆಲೂರು ತಾಲೂಕನ್ನು ಭಾರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಆದರೆ ಇನ್ನೂ ಕೂಡ ಸೂಕ್ತ ಪರಿಹಾರ ಮಾತ್ರ ಬಿಡುಗಡೆ ಆಗಿಲ್ಲ. ಪ್ರತಿ ಎಕರೆಗೆ 40 ಸಾವಿರ ರೂ. ಪರಿಹಾರವನ್ನು ರೈತರಿಗೆ ನೀಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.
ಈ ಬಾರಿ ಮಳೆ ಇಲ್ಲದೆ ಬೆಳೆ ಹಾಳಾಗಿ ರೈತರು ನಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಸ್ಪಂದಿಸಿ ಬರ ಪರಿಹಾರ, ಬೆಳೆ ವಿಮೆ ಮತ್ತು ಸಾಲ ಮನ್ನಾ ಮಾಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಶಾಸಕರು ಆಗ್ರಹಿಸಿದರು.
ಜಾನುವಾರು ರಕ್ಷಣೆಗೆ ಆದ್ಯತೆ: ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಕೆ.ಎನ್.ಪವನ್ಕುಮಾರ್ ಮಾತನಾಡಿ, ಈ ವರ್ಷ ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕನ್ನು ಬರಗಾಲ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ. ಆ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರೈತರಿಗೆ ಇಲಾಖೆ ವತಿಯಿಂದ ಉಚಿತವಾಗಿ ಮೇವು ಬೀಜ ವಿತರಿಸಲಾಗಿದೆ. ಫಲಾನುಭವಿಗಳು ಜಮೀನುಗಳಲ್ಲಿ ಮೇವು ಬೆಳೆದು ಜಾನುವಾರುಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಕೃಷಿ ಅಧಿಕಾರಿ ಮಹಾಂತೇಶ್ ಮೇವಿನ ಬೀಜದ ಬಿತ್ತನೆ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪಶು ವೈದ್ಯಾಧಿಕಾರಿ ಡಾ. ಹರ್ಷಿತಾ, ಡಾ. ಧನುಷ್, ಬಿಜೆಪಿ ಹಿರಿಯ ಮುಖಂಡ ಹಳೆಆಲೂರು ರಮೇಶ್, ದಲಿತ ಮುಖಂಡರಾದ ಗೇಕರವಳ್ಳಿ ಬಸವರಾಜ್, ಬಿಜೆಪಿ ವಕ್ತಾರ ಮಾವನೂರು ಮೋಹನ್, ಲಯನ್ಸ್ ಮಾಜಿ ಅಧ್ಯಕ್ಷ ನವೀನ್ ದಡದಳ್ಳಿ ಇತರರು ಇದ್ದರು.