ಅರಕಲಗೂಡು: ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ಸಮಾಜದಲ್ಲಿ ಗೌರವ ಹೆಚ್ಚಿಸಿಕೊಳ್ಳಬೇಕು ಎಂದು ಪಪಂ ಮಾಜಿ ಅಧ್ಯಕ್ಷ ಕೃಷ್ಣಯ್ಯ ಕಿವಿಮಾತು ಹೇಳಿದರು.
ಪಟ್ಟಣದ ದೇವರಾಜು ಅರಸು ಭವನದಲ್ಲಿ ಶನಿವಾರ ವಿಶ್ವಚೇತನ ಚಾರಿಟಬಲ್ ಟ್ರಸ್ಟ್ಟ್ ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 97ಕ್ಕಿಂತ ಅಧಿಕ ಪಡೆದ ಎಲ್ಲ್ಲ ಸಮುದಾಯದ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಡಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಮಾದರಿ ಕಾರ್ಯಕ್ರಮವಾಗಿದೆ. ಆಯಾ ಸಮುದಾಯದವರು ತಮ್ಮ ಮಕ್ಕಳಿಗೆ ಮಾತ್ರ ಸೀಮಿತಗೊಳಿಸಿಕೊಂಡ ಪ್ರತಿಭಾ ಪುರಸ್ಕಾರ ಮಾಡುವುದನ್ನು ಕಳೆದ ಎರಡು ದಶಕಗಳಿಂದ ಗಮನಿಸಿದ್ದೇನೆ. ಇದಕ್ಕೆ ಮೊದಲ ಬಾರಿಗೆ ಭಿನ್ನವಾಗಿ ವಿಶ್ವಚೇತನ ಜೈಭೀಮ್ ಚಾರಿಟಬಲ್ ಟ್ರಸ್ಟ್‌ನವರು ಜಾತಿ ಸಮುದಾಯವೆಂದು ವಿಂಗಡಣೆ ಮಾಡದೇ ಒಂದೇ ವೇದಿಕೆಯಡಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಮತ್ತು ಅವರ ಪಾಲಕರನ್ನು ಆಹ್ವಾನಿಸಿ ಮಕ್ಕಳ ಸಾಧನೆಯನ್ನು ಎಲ್ಲ ಸಮಾಜಕ್ಕೆ ತೋರಿಸಿ ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ಇದು ಡಾ.ಅಂಬೇಡ್ಕರ್ ಅವರ ಆಶಯವನ್ನು ಎತ್ತಿಹಿಡಿಯುವಂತ ಕಾರ್ಯಕ್ರಮ ಎಂದು ಬಣ್ಣಿಸಿದರು.
ಜಿಪಂ ಮಾಜಿ ಸದಸ್ಯ ಬರಗೂರು ರವಿ ಮಾತನಾಡಿ, ಇಲ್ಲಿ ಆಗಮಿಸಿರುವ ಎಲ್ಲ ವಿದ್ಯಾರ್ಥಿಗಳು ಕೂಡ ಶೇ.97ಕ್ಕಿಂತ ಅಧಿಕ ಅಂಕ ಪಡೆದವರೇ ಆಗಿದ್ದಾರೆ. ಅಲ್ಲದೆ ಎಲ್ಲ ಸಮುದಾಯಕ್ಕೆ ಸೇರಿದವರು ಎಂಬುದು ಹೆಮ್ಮೆಯ ವಿಷಯವಾಗಿದೆ. ಹೀಗೆ ಯಾವುದೇ ತಾರತಮ್ಯ, ಜಾತಿ ಭೇದ, ರಾಜಕೀಯ ಪ್ರೇರಿತವಾಗಿ ಕಾರ್ಯಗಳು ನಡೆಯಬಾರದು. ಪ್ರತಿಭಾವಂತ ವಿದ್ಯಾರ್ಥಿಗಳು ಪಾಲಕರೊಂದಿಗೆ ಆಗಮಿಸಿ ಸ್ವೀಕರಿಸಿರುವುದು ಅವರಿಗೆ ದೊಡ್ಡ ಗೌರವ ತಂದುಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಾದ ಸೋಮಶೇಖರ್, ಸಿ.ಸ್ವಾಮಿ, ಇಂಜಿನಿಯರ್ ಶಿವಕುಮಾರ, ವಕೀಲ ಸತೀಶ್, ಟ್ರಸ್ಟ್ ಅಧ್ಯಕ್ಷ ಕಿರಣ್ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಗುತ್ತಿಗೆದಾರ ರಮೇಶ್, ಮೋಹನ್, ಪ್ರದೀಪ್, ಅಶೋಕ್, ರವಿ, ರಾಜೇಂದ್ರ, ಮೋಹನ್‌ಕುಮಾರ್ ಇತರರಿದ್ದರು.