ಅರಸೀಕೆರೆ ಗ್ರಾಮಾಂತರ: ಯಾವುದೇ ವೃತ್ತಿ ಮಾಡಿದರೂ ಲೆಕ್ಕಾಚಾರ ಗೊತ್ತಿರಬೇಕು. ಪ್ರತಿಯೊಂದು ವೃತ್ತಿಯನ್ನು ಗೌರವಿಸಬೇಕು. ಮಕ್ಕಳು ಉತ್ತಮ ಶಿಕ್ಷಣ ಪಡೆದರೆ ಉತ್ತಮ ಹುದ್ದೆಗೆ ಹೋಗಬಹುದು ಎಂದು ಬೆಳಗುಂಬ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಹಸಿರು ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎಸ್. ಜಯಣ್ಣ ತಿಳಿಸಿದರು.
ಬೆಳಗುಂಬ ಗ್ರಾಪಂ ಮತ್ತು ಸರ್ಕಾರಿ ಪ್ರೌಢಶಾಲೆ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ವೃತ್ತಿ ಕೌಶಲ ಮತ್ತು ಮಾರ್ಗದರ್ಶನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಅಭಿವೃದ್ಧಿಯ ಕನಸು ಕಾಣಬೇಕು ಹಾಗೂ ದುಡಿಮೆಗೆ ಒಳ್ಳೆಯ ಮಾರ್ಗವನ್ನು ಅನುಸರಿಸಿ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ವೈ. ಶಾರದಮ್ಮ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗದೆ ಪಾಲಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಒಳ್ಳೆಯ ಗುಣಗಳನ್ನು ಬಳಸಿಳ್ಳಬೇಕು ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಂಯೋಜಕರಾದ ಕುಸುಮಾ ಮಾತನಾಡಿ, ಬ್ಯಾಂಕ್ ವ್ಯವಹಾರಗಳ ಬಗ್ಗೆ ತಿಳಿಸಿಕೊಟ್ಟರು.
ಶಾಲೆ ಮುಖ್ಯಶಿಕ್ಷಕಿ ಎನ್.ವಿ. ಶೈಲಾ ಮಾತನಾಡಿದರು. ಪಿ.ಎಸ್. ಶಿವಸ್ವಾಮಿ, ಡಿ.ಎನ್. ಯೋಗೀಶ್, ವಿ.ಆರ್. ಬಾಲಾಜಿ ನಾಯ್ಕ, ರವಿಕುಮಾರ್, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.