ಯುವಕರಲ್ಲಿ ರಾಯಣ್ಣನ ದೇಶ ಪ್ರೇಮದ ಗುಣ ಬೆಳೆಯಲಿ

ಅರಸೀಕೆರೆ ನಗರದಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಮಾಡಿದ ಕ್ಷಣ. ಮತ್ತೊಂದು ಚಿತ್ರದಲ್ಲಿ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಅರಸೀಕೆರೆ ನಗರದಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಮಾಡಿದ ಕ್ಷಣ. ಮತ್ತೊಂದು ಚಿತ್ರದಲ್ಲಿ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • Sangolli Rayanna
ಅರಸೀಕೆರೆ: ನಾಡಿನ ದಾಸ್ಯ ವಿಮೋಚನೆಗೆ ಜನಮಾನಸದಲ್ಲಿ ಸ್ವಾಭಿಮಾನದ ಕಿಚ್ಚುಹಚ್ಚಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಬಣ್ಣಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ನಗರದ ಪುರಸಭೆ ವಾಣಿಜ್ಯ ಸಂಕೀರ್ಣದ ಬಳಿ ಅಂದಾಜು ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದ ಹಾದಿ ಗಮನಿಸಿದರೆ ದೇಶದ ದಾಸ್ಯ ವಿಮೋಚನೆಗಾಗಿ ಹೋರಾಟ ನಡೆಸಿದವರು ಅಸಂಖ್ಯ. ಕಿತ್ತೂರು ರಾಣಿ ಚನ್ನಮ್ಮನ ಮಗನಂತೆ ಇದ್ದ ವೀರ ಸೇನಾನಿ ರಾಯಣ್ಣ ಬ್ರಿಟಿಷರ ಕುತಂತ್ರದ ವಿರುದ್ಧ ಸಮರವನ್ನೇ ಸಾರಿದ್ದರು. ನಮ್ಮವರೇ ಕುತಂತ್ರದಿಂದ ಆತನನ್ನು ಹಿಡಿದು ಗಲ್ಲಿಗೇರುವಂತೆ ಮಾಡಿದ್ದು ಅತ್ಯಂತ ದುಃಖದ ಸಂಗತಿಯಾಗಿದೆ. ನಾಡು, ನುಡಿಯ ವಿಷಯದಲ್ಲಿ ಎಲ್ಲರೂ ಒಗ್ಗೂಡಿ ದುಡಿಯುವ ಮೂಲಕ ಮಹನೀಯರಿಗೆ ಗೌರವ ಸಲ್ಲಿಸೋಣ. ಯುವ ಸಮುದಾಯ ಸಂಗೊಳ್ಳಿ ರಾಯಣ್ಣನ ದೇಶ ಪ್ರೇಮದ ಗುಣ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಕೆಲ ತಿಂಗಳ ಹಿಂದೆ ಆಯೋಜಿಸಲಾಗಿದ್ದ ಕನಕ ಜಯಂತಿ ಆಚರಣೆ ವೇಳೆ ಶ್ರೀಗಳ ಸಮ್ಮುಖದಲ್ಲಿ ಉದ್ವೇಗದಿಂದ ಮಾತನಾಡಿದ್ದು ನನಗೂ ಬೇಸರವಾಗಿದ್ದು, ಕ್ಷಮೆ ಕೋರುತ್ತೇನೆ. ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿಯ ಆಶಯದಂತೆ ಗಂಡಸಿ ಹೋಬಳಿ ಮುದುಡಿ ಗ್ರಾಮದ ಸರಹದ್ದಿನಲ್ಲಿರುವ ಗಂಗೆಮಡು ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಿ ಅಗತ್ಯ ಅನುದಾನ ತರಲಾಗುವುದು. ಇಂತಹ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ನೀಡಿರುವ ಮಾದರಿಯಲ್ಲಿ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ನಿರ್ಮಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಯಾರೋ ಒಂದಿಬ್ಬರು ಅನಗತ್ಯ ಗೊಂದಲ ಮೂಡಿಸಲು ಸುಖಾ ಸುಮ್ಮನೆ ಮಾಧ್ಯಮದ ಎದುರು ಮಾನಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಾತಿನ ಚಾಟಿ ಬೀಸಿದರು.
ಕ್ಷೇತ್ರದ ಅಭಿವೃದ್ಧಿ ಗಮನಿಸಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಆದ್ದರಿಂದಲೇ ಸಿಎಂ ಸಿದ್ದರಾಮಯ್ಯ ನಿರೀಕ್ಷೆಗೂ ಮೀರಿ ಅನುದಾನ ಕೊಟ್ಟಿದ್ದಾರೆ. ಯಾರಿಗೂ ಮೋಸ ಮಾಡಿ ಹೋಗಿಲ್ಲ. ಏನೇನು ಕೆಲಸ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಸಂದರ್ಭ ಬಂದಾಗ ನಾನೇ ಮುಂದೆ ನಿಂತು ದೊಡ್ಡಗೌಡರ ಪುತ್ಥಳಿ ಮಾಡಿಸುತ್ತೇನೆ. ಅದನ್ನು ಬೇರೆಯವರಿಂದ ಹೇಳಿಸಿಕೊಳ್ಳಬೇಕಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ದೇಶದ ಹೆಮ್ಮೆಯ ಪುತ್ರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣದ ಬಹುದಿನದ ಕನಸು ಶಾಸಕರು ಹಾಗೂ ಸಮಾಜದ ಮುಖಂಡರ ಪರಿಶ್ರಮದಿಂದ ನನಸಾಗಿದೆ. ಪಾಲಕರು ಮಕ್ಕಳಿಗೆ ದೇಶಕ್ಕಾಗಿ ಹೋರಾಟ ನಡೆಸಿದ ಮಹನೀಯರ ವಿಚಾರಧಾರೆಗಳನ್ನು ತಿಳಿಸಬೇಕು ಎಂದು ಹೇಳಿದರು.
ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ಇಚ್ಛಾಶಕ್ತಿ ಫಲವಾಗಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಕಿತ್ತೂರು ರಾಣಿ ಚನ್ನಮ್ಮನ ಬಲಗೈ ಎಂಬಂತೆ ಇದ್ದ ಸಮರ ಶೂರನನ್ನು ಸದಾ ಸ್ಮರಿಸೋಣ ಎಂದರು. ಎಂ.ಜಿ.ಶಿವಶಂಕರ ಸ್ವಾಮಿ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಬಿಳಿ ಚೌಡಯ್ಯ, ಮುಖಂಡರಾದ ಗಂಜಿಗೆರೆ ಚಂದ್ರಶೇಖರ್, ಜಿ.ಬಿ.ಶಶಿಧರ್, ಮೆಟ್ರೊಬಾಬು, ಜಿಟಿಎಸ್ ಗೌಸ್ ಖಾನ್ ಸೇರಿದಂತೆ ಹಲವರು ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net