ಕ್ರಾಫರ್ಡ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಐಸೋಲೆಷನ್ ವಾರ್ಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು. ಯುವರಾಜ್, ಅರುಣ್‌ಕುಮಾರ್ ಡಾ.ವೆಂಕಟೇಶ್ ಇತರರು ಇದ್ದರು.
ಸಕಲೇಶಪುರ: ಪಟ್ಟಣದಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ಶೀಘ್ರ ಆರಂಭಿಸುವ ಮೂಲಕ ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಗುರುವಾರ ಕ್ರಾಫರ್ಡ್ ಆಸ್ಪತ್ರೆಯಲ್ಲಿ 32 ಲಕ್ಷದಲ್ಲಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 12 ಹಾಸಿಗೆ ಸಾಮರ್ಥ್ಯದ ಐಸೋಲೇಷನ್ ವಾರ್ಡ್ ಉದ್ಘಾಟನೆಗೊಳಿಸಿ ಮಾತನಾಡಿದರು. ತಾಲೂಕು ಕೇಂದ್ರಕ್ಕೆ ಬರಬೇಕಾದರೆ ಗ್ರಾಮೀಣ ಜನರು ಕನಿಷ್ಠ 50ರಿಂದ 60 ಕಿ.ಮೀ. ಕ್ರಮಿಸಬೇಕಿದೆ. ಇದರಿಂದಾಗಿ ತಾಲೂಕು ಕ್ರಾಫರ್ಡ್ ಆಸ್ಪತ್ರೆಯಲ್ಲಿ ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಇರಬೇಕಿರುವ ಎಲ್ಲ ಸೌಲಭ್ಯಗಳನ್ನು ಇಲ್ಲಿನ ಆಸ್ಪತ್ರೆಗೆ ಸರ್ಕಾರ ಕಲ್ಪಿಸಬೇಕು. ಸದ್ಯ ಆಸ್ಪತ್ರೆಯಲ್ಲಿ ಹೊರ ಹಾಗೂ ಒಳ ರೋಗಿಗಳ ಸಂಖ್ಯೆ ಹೆಚ್ಚಿದ್ದು ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯದೊತ್ತಡಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸಿಬ್ಬಂದಿ ಕಾರ್ಯದೊತ್ತಡ ತಪ್ಪಿಸುವ ಹಾಗೂ ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ತಾಯಿ-ಮಗು ಆಸ್ಪತ್ರೆ ಮಂಜೂರು ಮಾಡುವಂತೆ ಆರೋಗ್ಯ ಸಚಿವರಲ್ಲಿ ವಿನಂತಿಸಿಕೊಂಡಿದ್ದು ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಆಸ್ಪತ್ರೆಯಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ರೋಗಿಗಳಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದರು.
ಐಸೋಲೆಸನ್ ವಾರ್ಡ್ ಆರಂಭಿಸುವ ಮೂಲಕ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರನ್ನು ಇತರ ಒಳರೋಗಿಗಳಿಂದ ಬೇರ್ಪಡಿಸಿ ಚಿಕಿತ್ಸೆ ನೀಡಲು ಅನುಕೂಲವಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಯುವರಾಜ್ ಮಾತನಾಡಿ, ಜಿಲ್ಲೆಯಲ್ಲೆ ಅತ್ಯುತ್ತಮ ಪಾರಂಪರಿಕ ಕಟ್ಟಡ ಹೊಂದಿರುವ ಕ್ರಾಫರ್ಡ್ ಆಸ್ಪತ್ರೆಗೆ ಅಗತ್ಯ ನೆರವು ನೀಡಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಕೊರತೆ ಇರುವ ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಈ ವೇಳೆ ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಅರುಣ್‌ಕುಮಾರ್, ಡಾ ವೆಂಕಟೇಶ್, ಡಾ.ನಿಶ್ಚಿತಾ, ಡಾ.ಸುಮಾ, ಡಾ.ಆಯುಷ್, ಬಿಜೆಪಿ ಮುಖಂಡ ಸೋಮಶೇಖರ್, ಗೋಡಮನೆ ಪರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.