ಶ್ರವಣಬೆಳಗೊಳ: ಇಲ್ಲಿನ ಚಂದ್ರಗಿರಿ ಚಿಕ್ಕಬೆಟ್ಟದಲ್ಲಿ 23ನೇ ತೀರ್ಥಂಕರ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಬಸದಿಯಲ್ಲಿ ಮೋಕ್ಷ ಕಲ್ಯಾಣ ಮುಕುಟ ಸಪ್ತಮಿಯ ಪ್ರಯುಕ್ತ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಬುಧವಾರ ವಿಶೇಷ ಪೂಜಾ ಕೈಂಕರ್ಯ ಹಾಗೂ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು.
ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಚಂದ್ರಗಿರಿಯ 18ಅಡಿ ಎತ್ತರದ, ಸಪ್ತಫಣಾಧಾರಿ ಅಂತರಾಳ ಪಾರ್ಶ್ವನಾಥ ಸ್ವಾಮಿಯ ಸನ್ನಿಧಿಯಲ್ಲಿ ಶಾಂತಿಧಾರೆ ಹಾಗೂ ನವಕಳಸಗಳನ್ನು ಪ್ರತಿಷ್ಠಾಪಿಸಲಾಯಿತು.
ಜಲಾಭಿಷೇಕದ ಬಳಿಕ ಎಳನೀರು, ಕಬ್ಬಿನ ಹಾಲು, ಕ್ಷೀರ, ಕಲ್ಕಚೂರ್ಣ, ಅರಿಶಿಣ, ಶ್ರೀಗಂಧ ಹಾಗೂ ಅಷ್ಟಗಂಧಗಳಿಂದ ವಿವಿಧ ಅಭಿಷೇಕಗಳನ್ನು ನೆರವೇರಿಸಲಾಯಿತು. ಬಳಿಕ ಬೃಹತ್ ಪುಷ್ಪಹಾರವನ್ನು ಸಮರ್ಪಿಸಿ ಪುಷ್ಪವೃಷ್ಠಿ ಮಾಡಲಾಯಿತು. ಮಹಾಶಾಂತಿಧಾರೆ ಹಾಗೂ ಮಹಾಮಂಗಳಾರತಿಯೊಂದಿಗೆ ಪೂಜಾ ವಿಧಿಗಳು ಸಂಪನ್ನಗೊಂಡವು.
ಮೋಕ್ಷ ಕಲ್ಯಾಣದ ಸಂಕೇತವಾಗಿ ನಿರ್ವಾಣವಾದ ಲಡ್ಡುವನ್ನು ಅರ್ಪಿಸಿದ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ತೀರ್ಥಕರರ ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು. ಕ್ಷೇತ್ರದಲ್ಲಿರುವ ಪಾರ್ಶ್ವನಾಥ ಸ್ವಾಮಿಯ ಎಲ್ಲ ಬಸದಿಗಳಲ್ಲಿಯೂ ಮುಕುಟ ಸಪ್ತಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಮುನಿಶ್ರೀ ಪ್ರಭಾಕರ್ ಸಾಗರ ಮಹಾರಾಜರು, ಕ್ಷುಲ್ಲಿಕಾಶ್ರೀ ಅಮೃತಮತಿ ಮಾತಾಜಿ ಹಾಗೂ ಕ್ಷುಲ್ಲಿಕಾಶ್ರೀ ಅಮರಜ್ಯೋತಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.
ಪೂಜೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಗಂಧೋದಕ ವಿತರಿಸಲಾಯಿತು. ಹಿಂದೂಪುರದ ನಾಗೇಂದ್ರ ಕುಮಾರ್ ಕುಟುಂಬದವರು ಸೇವಾಕರ್ತರಾಗಿ, ವಿಮಲ್ ಕುಮಾರ್ ತಂಡದವರು ಪೂಜಾ ನೇತೃತ್ವ ವಹಿಸಿದ್ದರು. ವ್ಯವಸ್ಥಾಪಕರಾದ ಜೀವೇಂದ್ರ ಕುಮಾರ್, ರಾಮದಾಸ್ ಸೇರಿದಂತೆ ಭಕ್ತರು ಹಾಗೂ ಸೇವಾಕರ್ತರು ಉಪಸ್ಥಿತರಿದ್ದರು.