ಪುರೋಹಿತರು ಬೇಡುವಂತರಾಗದೆ ದಾನ ನೀಡುವಂತರಾಗಲಿ

ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ 5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಪಾದೂರ ಸುದರ್ಶನಕುಮಾರ ಇಂದ್ರ, ಎಸ್.ಎಂ.ಸನ್ಮತಿ ಕುಮಾರ್, ಎಚ್.ಪಿ.ಮೋಹನ್‌ಕುಮಾರ್ ಶಾಸ್ತ್ರಿ ಇತರರು ಇದ್ದರು.
ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ 5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಪಾದೂರ ಸುದರ್ಶನಕುಮಾರ ಇಂದ್ರ, ಎಸ್.ಎಂ.ಸನ್ಮತಿ ಕುಮಾರ್, ಎಚ್.ಪಿ.ಮೋಹನ್‌ಕುಮಾರ್ ಶಾಸ್ತ್ರಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಸಲಹೆ
  • ಸಮಾರೋಪ ಸಮಾರಂಭ
ಶ್ರವಣಬೆಳಗೊಳ: ವಿದ್ವಾಂಸರು, ಅರ್ಚಕರು, ಪುರೋಹಿತರು ಪೂಜ್ಯ ಸ್ಥಾನದಲ್ಲಿರುತ್ತಾರೆ. ಪುರೋಹಿತರಿಗೆ ಸಮಾಜದಲ್ಲಿ ವಿಶೇಷವಾದ ಗೌರವ ಸ್ಥಾನ ನೀಡಲಾಗುತ್ತದೆ. ನಮ್ಮ ಪುರಾತನ ದೇವಾಲಯಗಳು, ಸಂಸ್ಕೃತಿ, ಪರಂಪರೆಯನ್ನು ರಕ್ಷಣೆ ಮಾಡುವಲ್ಲಿ ಪುರೋಹಿತರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಹೇಳಿದರು.
ಶ್ರವಣಬೆಳಗೊಳದ ಭಂಡಾರಿ ಬಸದಿಯ ಆವರಣದಲ್ಲಿ ಆಯೋಜಿಸಿದ್ದ 5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.
ಪೌರೋಹಿತ್ಯ ಎನ್ನುವುದು ಕೇವಲ ಒಂದು ವೃತ್ತಿಯಲ್ಲ. ಸಮಾಜದ ಹಿತ ಬಯಸುವ ಶ್ರೇಷ್ಠವಾದ ಸ್ಥಾನ. ಶ್ರವಣಬೆಳಗೊಳ ತ್ಯಾಗದ ಭೂಮಿಯಾಗಿದ್ದು, ಶಾಸ್ತ್ರಿಗಳಿಗೆ, ವಿದ್ವಾಂಸರಿಗೆ ಗೌರವ ಸತ್ಕಾರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಶ್ರವಣಬೆಳಗೊಳ ಜೈನ ಧರ್ಮಿಯರ ಕೇಂದ್ರಬಿಂದುವಾಗಿತ್ತು. ಎಲ್ಲ ಶಾಸ್ತ್ರಿಗಳಿಗೆ, ವಿದ್ವಾಂಸರಿಗೆ ಜ್ಞಾನದ ಕೇಂದ್ರಸ್ಥಾನವಾಗಿತ್ತು ಎಂದರು.
ಪುರೋಹಿತರು ಬೇಡುವಂತವರಾಗದೆ ದಾನ ನೀಡುವಂತರಾಗಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸುಭದ್ರರಾಗಬೇಕು. ಎಲ್ಲರೂ ಸಂಘಟಿತರಾಗಿ ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಬೇಕು. ಅವಕಾಶಗಳನ್ನು ಬಳಸಿಕೊಂಡು ಉನ್ನತಮಟ್ಟಕ್ಕೆ ಏರಬೇಕು. ನಮ್ಮಲ್ಲಿ ಕಲಿಯುವ ಹಂಬಲ ಇರಬೇಕು. ಆಗ ಮಾತ್ರ ಹೆಚ್ಚು ಜ್ಞಾನಿಗಳಾಗಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಉತ್ತಮ ವಸ್ತ್ರ ಸಂಹಿತೆ ರೂಢಿಸಿಕೊಳ್ಳಬೇಕು. ಧಾರ್ಮಿಕವಾಗಿ ಜ್ಞಾನವನ್ನು ವೃದ್ಧಿಸಿಕೊಂಡಾಗ ಸಮಾಜದಲ್ಲಿ ಉನ್ನತ ಸ್ಥಾನ ದೊರೆಯುತ್ತದೆ. ಪುರೋಹಿತರು ಸಮಾಜದ ಆಸ್ತಿ ಇದ್ದಂತೆ. ಪ್ರತಿನಿತ್ಯ ಸಮಾಜಕ್ಕೆ ಮಾರ್ಗದರ್ಶನ ನೀಡಿ ಧರ್ಮ ಜಾಗೃತಿ ಮೂಡಿಸಬೇಕು. ನಮ್ಮ ನಡೆ-ನುಡಿಗಳು ಸಮಾಜಕ್ಕೆ ಆದರ್ಶಪ್ರಾಯವಾಗಿರಬೇಕು. ಸಾಮೂಹಿಕ ಕಾರ್ಯಕ್ರಮಗಳಲ್ಲಿ ಕಂದಮೂಲ ಆಹಾರಗಳನ್ನು ತ್ಯಜಿಸುವಂತೆ ಶ್ರಾವಕರಿಗೆ ಅರಿವು ಮೂಡಿಸಬೇಕು ಎಂದರು.
ಪುರೋಹಿತರ ಮುಖ್ಯ ಸಮಸ್ಯೆಯೆಂದರೆ ನಮಗೆ ಗೌರವ ಸಿಗುತ್ತಿಲ್ಲ ಎಂಬುದು. ದೇವತಾ ಪೂಜೆಯನ್ನು ಯಾವುದೇ ಅಪೇಕ್ಷೆಯಿಲ್ಲದಂತೆ ಮಾಡಬೇಕು. ಆಗ ಮಾತ್ರ ಪುರೋಹಿತರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ಪೂಜೆ, ಅಭಿಷೇಕ ಸಂದರ್ಭಗಳಲ್ಲಿ ಆಸೆ, ಲೋಭಾ, ಮೋಹವನ್ನು ಬಿಡಬೇಕು. ದ್ರವ್ಯಗಳ ಮೇಲಿನ ಮೋಹವನ್ನು ತ್ಯಜಿಸಿದರೆೆ ಸಮಾಜದಲ್ಲಿ ಉನ್ನತ ಗೌರವ ಲಭಿಸುತ್ತದೆ ಎಂದು ಶ್ರೀಗಳು ಹೇಳಿದರು.
ಇದೇ ವರ್ಷ ಏಪ್ರಿಲ್‌ನಲ್ಲಿ ಚಂದ್ರಗಿರಿ ಮಹೋತ್ಸವ ನಡೆಯಲಿದೆ. ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, 5 ದಿನಗಳು ನೆರವೇರಲಿದೆ. ಆ ಸಂದರ್ಭದಲ್ಲಿ ಪುರೋಹಿತರ ಸಮ್ಮೇಳನ ನಡೆಸಲು ಯೋಜನೆ ರೂಪಿಸಲಾಗಿದೆ. ಆಗ ದೇಶದ ಎಲ್ಲ ಪುರೋಹಿತರನ್ನು ಆಹ್ವಾನಿಸಲಾಗುತ್ತದೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಕೋರಿದರು.
ಸಮ್ಮೇಳನಾಧ್ಯಕ್ಷ ಡಾ.ಪಾದೂರ ಸುದರ್ಶನಕುಮಾರ ಇಂದ್ರ, ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ಅಧ್ಯಕ್ಷ ಪ್ರತಿಷ್ಠಾಚಾರ್ಯ ಎಸ್.ಎಂ.ಸನ್ಮತಿ ಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ಎಚ್.ಪಿ.ಮೋಹನ್‌ಕುಮಾರ್ ಶಾಸ್ತ್ರಿ, ಕಾರ್ಯಾಧ್ಯಕ್ಷ ತವನಪ್ಪ ಪಂಡಿತ, ಸಾಂಗ್ಲಿಯ ದೀಪಕ್‌ಕುಮಾರ ಬಾಳೋಸೋ ಉಪಾಧ್ಯೆ, ಪಂಡಿತ್ ಅಶೋಕ್ ಇಂದ್ರ, ಧರಣೇಂದ್ರ ಮಂಜಯ್ಯ ಇಂದ್ರ ಪಂಡಿತ, ಹರ್ಷ ನಾಗರಾಜ್ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net