ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಜನಪ್ರತಿನಿಧಿಗಳು ಅರಿಯಲಿ

 ಟಿ.ಎ.ನಾರಾಯಣಗೌಡ
ಟಿ.ಎ.ನಾರಾಯಣಗೌಡ
Published on
ಅರಸೀಕೆರೆ ಗ್ರಾಮಾಂತರ: ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದನಿ ಎತ್ತದಂತಹ ಜನಪ್ರತಿನಿಧಿಗಳನ್ನು ರಾಜ್ಯದಿಂದ ಆಯ್ಕೆ ಮಾಡಿ ಕಳುಹಿಸುತ್ತಿರುವುದು ಕನ್ನಡಿಗರ ದೌರ್ಭಾಗ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ತೀವ್ರ ಕಳವಳ ವ್ಯಕ್ತಪಡಿಸಿದರು.
ಚುನಾಯಿತ ಜನಪ್ರತಿನಿಧಿಗಳ ನಡೆ ಒಂದೆಡೆಯಾದರೆ, ಮತ್ತೊಂದೆಡೆ ನ್ಯಾಯಾಲಯಗಳಲ್ಲೂ ಕರ್ನಾಟಕದ ಪರವಾಗಿ ತೀರ್ಪು ಬಾರದಿರುವುದು ಕನ್ನಡಿಗರ ಭವಿಷ್ಯ ಕುರಿತು ಭಯಪಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಕನ್ನಡಿಗರ ಮೇಲೆ ಗಡಿಭಾಗದಲ್ಲಿ ನಡೆಯುತ್ತಿದ್ದ ದೌರ್ಜನ್ಯ ಈಗ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಒಕ್ಕೂಟದ ವ್ಯವಸ್ಥೆ ಒಪ್ಪಿಕೊಂಡಿರುವ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯವನ್ನು ದೇಶವನ್ನಾಳುತ್ತಿರುವ ಪ್ರಬುದ್ಧರು ಅರ್ಥೈಸಿಕೊಳ್ಳಬೇಕಿದೆ ಎಂದರು.
ಇನ್ನಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಿದ್ದು, ನಾವು ಚುನಾಯಿಸುವ ಜನಪ್ರತಿನಿಧಿಗಳು ನಾಡು, ನುಡಿ ಬಗ್ಗೆ ನಿಲುವು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬ ಮಾನದಂಡವನ್ನು ಆಧರಿಸಿ ಚುನಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಕರವೇ ಅರಸೀಕೆರೆ ತಾಲೂಕು ಘಟಕದ ಅಧ್ಯಕ್ಷ ಕಿರಣ್‌ಕುಮಾರ್, ಮುಖಂಡ ರಘು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net