ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪುರಸಭೆಯಿಂದ ಆಯೋಜಿಸಿದ್ದ ಸ್ವಚ್ಛತಾ ರ‌್ಯಾಲಿಗೆ ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಚಾಲನೆ ನೀಡಿದರು. ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಮೋಹನ್ ಕುಮಾರ್ ಇತರರು ಇದ್ದರು.
ಬೇಲೂರು: ಬೇಲೂರು ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಬೇಕು. ವರ್ತಕರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಬಟ್ಟೆ ಬ್ಯಾಗ್‌ಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ರ‌್ಯಾಲಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಪುರಸಭೆಯ ವಾಹನಗಳಿಗೆ ಹಾಕಬೇಕು. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಬಾರದು. ಪಟ್ಟಣದ ಮೂಡಿಗೆರೆ ರಸ್ತೆಯ ಎರಡೂ ಬದಿಯಲ್ಲೂ ಕಸ ಹಾಕುವ ಪ್ರವೃತ್ತಿ ಹೆಚ್ಚಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ ಮಾತನಾಡಿ, ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಶಿಕ್ಷಣ ಸಂವಹನ ಕಾರ್ಯಕ್ರಮವನ್ನು ಪಟ್ಟಣದ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ನಾಗರಿಕರು ಪುರಸಭೆ ಸಿಬ್ಬಂದಿಗೆ ಸಹಕಾರ ನೀಡುವ ಮೂಲಕ ಸ್ವಚ್ಛತೆಗೆ ಮುಂದಾಗಬೇಕು ಎಂದರು.
ಸ್ವಚ್ಛತಾ ರ‌್ಯಾಲಿಯಲ್ಲಿ ಪುರಸಭೆ ಸಿಬ್ಬಂದಿ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪುರಸಭೆಯಿಂದ ಮುಖ್ಯರಸ್ತೆ ಮೂಲಕ ಡಾ.ಅಂಬೇಡ್ಕರ್ ವೃತ್ತ, ಚನ್ನಕೇಶವಸ್ವಾಮಿ ದೇಗುಲದ ಮೂಲಕ ರ‌್ಯಾಲಿ ಸಾಗಿತು.
ಪುರಸಭೆ ಇಂಜಿನಿಯರ್ ಮೋಹನ್ ಕುಮಾರ್, ಆರೋಗ್ಯಾಧಿಕಾರಿ ಲೋಹಿತ್, ವೈಡಿಡಿ ಕಾಲೇಜಿನ ಉಪನ್ಯಾಸಕರಾದ ಬಾಬು ಪ್ರಸಾದ್, ವೀರಭದ್ರಪ್ಪ, ಸುಂಮತ್ ಕುಮಾರ್, ಹೊಯ್ಸಳ ಪ್ರೌಢಶಾಲೆ ಶಿಕ್ಷಕ ನಂದೀಶ್ ಸೇರಿದಂತೆ ಪುರಸಭೆ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.