ಅರಸೀಕೆರೆ ನಗರದ ಶ್ರೀಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಜರುಗಿದ ಧಾರ್ಮಿಕ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಶಾಸಕ ಕೆ.ಎಂ. ಶಿವಲಿಂಗೇಗೌಡ ,ಲಕ್ಷ್ಮಣ್, ನಾಗಶ್ರೀ ಇತರರಿದ್ದಾರೆ.
ಅರಸೀಕೆರೆ: ದಾರ್ಶನಿಕರ ತತ್ವ, ಆದರ್ಶಗಳು ಬದುಕಿಗೆ ದಾರಿದೀಪವಾಗಲಿ ಎಂದು ಹಾವೇರಿ ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ನಗರದ ಎಪಿಎಂಸಿ ಸಮೀಪದ ಶ್ರೀಗಂಗಾ ಪರಮೇಶ್ವರಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀಗಂಗಾಪರಮೇಶ್ವರಿ ಅಮ್ಮನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬಿಗರ ಚೌಡಯ್ಯ ಕೇವಲ ಸಮುದಾಯದ ನಾಯಕರು ಮಾತ್ರವಲ್ಲ, ಜಗತ್ತಿಗೆ ದಾರಿ ತೋರಿದ ಮಹಾನ್ ದಾರ್ಶನಿಕರು. ಅವರ ವಚನಗಳು ಮತ್ತು ವಿಚಾರಗಳು ವಿಶ್ವ ಮಟ್ಟದಲ್ಲಿ ಚಿಂತನೆಗೆ ಮುನ್ನುಡಿ ಬರೆದಿವೆ. ಸಮಾನತೆ, ಸೇವೆ ಮತ್ತು ಸತ್ಯದ ಮಾರ್ಗವನ್ನು ಬೋಧಿಸಿದ್ದು, ಇಂದಿಗೂ ಅವು ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದರು.
ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ನಗರದಲ್ಲಿ ಎಲ್ಲ ಸಮುದಾಯ ಪ್ರತಿನಿಧಿಸುವ ದಾರ್ಶನಿಕರ ಪುತ್ಥಳಿಗಳನ್ನು ನಿರ್ಮಿಸಲು ಜಾಗವನ್ನು ನಿಗದಿಪಡಿಸಿ ಬನ್ನಿ. ಅದರ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಾಯವನ್ನು ನೀಡಲಾಗುವುದು. ಇದರಿಂದಾಗಿ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸಿದಂತಾಗಲಿದೆ. ಗಂಗಾಮಾತೆ ಕೇವಲ ಒಂದು ನದಿ ಅಲ್ಲ, ಅದು ಜೀವನದ ಮೂಲ. ಗಂಗಾಮಾತೆ ಶುದ್ಧತೆ, ಶಕ್ತಿ ಮತ್ತು ಚೈತನ್ಯದ ಸಂಕೇತ. ಗಂಗೆಯನ್ನು ಆರಾಧಿಸುವ ಗಂಗಾಮತಸ್ಥರು ಪ್ರಕೃತಿಯೊಂದಿಗೆ ಒಗ್ಗಟ್ಟಾಗಿ ಬದುಕುವ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ. ಅವರ ಜೀವನ ಶೈಲಿ ಮತ್ತು ಸಂಸ್ಕೃತಿ ಸಮಾಜಕ್ಕೆ ಆದರ್ಶ ಎಂದರು.
ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪಿಎಸ್ ಐ ಲಕ್ಷ್ಮಣ್ ಮಾತನಾಡಿದರು. ಯಳವಾರೆ ಕೇಶವಮೂರ್ತಿ, ಡಿ.ಆರ್. ಕೇಶವಮೂರ್ತಿ, ಶಿವಣ್ಣ, ಕುಮಾರ್, ಧರ್ಮಪ್ಪ, ಹನುಮಂತು, ಗೋಪಾಲ್ ಇತರರಿದ್ದರು.