ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಸಿಗುವಂತಾಗಲಿ

ಬೇಲೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ದೇಶಾಣಿ ಆನಂದ್ ಮಾತನಾಡಿದರು.
ಬೇಲೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ದೇಶಾಣಿ ಆನಂದ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅರ್ಹ ಫಲಾನುಭವಿಗಳಿಗೆ ಎಲ್ಲ ಗ್ಯಾರಂಟಿ ಯೋಜನೆಗಳು ಸಿಗುವಂತಾಗಬೇಕು
  • ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ದೇಶಾಣಿ ಆನಂದ್
ಬೇಲೂರು: ಅರ್ಹ ಫಲಾನುಭವಿಗಳಿಗೆ ಎಲ್ಲ ಗ್ಯಾರಂಟಿ ಯೋಜನೆಗಳು ಸಿಗುವಂತಾಗಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ದೇಶಾಣಿ ಆನಂದ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಸಭೆಯಲ್ಲಿ ದೇಶಾಣಿ ಆನಂದ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಯೋಜನೆಗಳ ಅನುಷ್ಠಾನದಲ್ಲಿ ಲೋಪ ಕಂಡು ಬಂದ ಹಿನ್ನೆಲೆ ಹಾಗೂ ದತ್ತಾಂಶ ಗೊಂದಲಗಳನ್ನು ನಿವರಿಸುವಂತೆ ಸೂಚಿಸಿದರು.
ತಾಲೂಕಿನಲ್ಲಿ ಒಟ್ಟು 621 ಹುದ್ದೆಗಳು ಖಾಲಿಯಿದ್ದು, ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಕನಿಷ್ಠ 500 ಜನರನ್ನು ಬದಲಿ ವ್ಯವಸ್ಥೆಯಡಿ ನೇಮಕ ಮಾಡುವ ಅಗತ್ಯವಿದೆ. ತಾಲೂಕಿನಲ್ಲಿರುವ ಒಟ್ಟು 310 ಅಂಗನವಾಡಿ ಕೇಂದ್ರಗಳಲ್ಲಿದ್ದು, ಎಷ್ಟು ಸ್ವಂತ ಕಟ್ಟಡದಲ್ಲಿವೆ, ಎಷ್ಟು ಬಾಡಿಗೆ ಕಟ್ಟಡಗಳಲ್ಲಿವೆ, ಎಷ್ಟು ಶಿಥಿಲಾವಸ್ಥೆಯಲ್ಲಿವೆ ಎಂಬ ಮಾಹಿತಿ ನೀಡುವಂತೆ ತಿಳಿಸಿದರು.
ಗ್ಯಾರಂಟಿ ಫಲಾನುಭವಿಗಳ ದತ್ತಾಂಶದಲ್ಲಿ 49,793 ಜನರು ನೋಂದಾಯಿತರಾಗಿದ್ದರೂ ಸಹಾಯಧನ ವಿತರಣೆ ಹಾಗೂ ದಾಖಲೆಗಳ ಅಂಕಿ-ಅಂಶಗಳಲ್ಲಿ ವ್ಯತ್ಯಾಸವಾಗಿದ್ದು, ಇದನ್ನು ಸರಿಪಡಿಸಬೇಕಿದೆ. ಜಿಎಸ್‌ಟಿ ಹಾಗೂ ವಲಸೆ ಸಮಸ್ಯೆ ಹಿನ್ನೆಲೆಯಲ್ಲಿ ನೈಜ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸರಿಯಾದ ಮಾಹಿತಿ ನೀಡುವಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ತೋರಿದರೆ ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಮುಂದಿನ ಸಭೆಗೂ ಮುನ್ನ ಪ್ರತಿ ಫಲಾನುಭವಿ ಬ್ಯಾಂಕ್ ಖಾತೆಗೆ ಜಮೆ ಮಾಡಿರುವ ಕುರಿತು ಹಾಗೂ ಅಂಗನವಾಡಿ ಕಟ್ಟಡಗಳ ಕುರಿತು ಸಭೆಗೆ ಸಂಪೂರ್ಣವಾದ ವರದಿ ಸಲ್ಲಿಸಬೇಕು ಎಂದರು.
ತಾಪಂ ಇಒ ಮಾತನಾಡಿ, ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ವಾಸನರಯಿದ್ದು ಗುಣಮಟ್ಟ ಹಾಗೂ ಅಪೂರ್ಣ ಕಾಮಗಾರಿಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ. ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿಯೇ ಗಂಭೀರ ಲೋಪಗಳು ಕಂಡು ಬಂದಿರುವುದು ಸರಿಯಲ್ಲ. ಅನೇಕ ಕಡೆ ಮನೆ ಮನೆ ಸಂಪರ್ಕ ನಲ್ಲಿಗಳ ಅಳವಡಿಕೆ ಪೂರ್ಣಗೊಂಡಿಲ್ಲ. ನಿಯಮಾನುಸಾರ ಉತ್ತಮ ಪೈಪ್‌ಗಳನ್ನು ಬಳಸಬೇಕು. ಕಳಪೆ ಬಳಿಸಿದರೆ ಪೈಪ್ ಬೇಗ ಹಾನಿಯಾಗುವ ಸಾಧ್ಯತೆ ಇದೆ. ಮತ್ತು ಪೈಪ್‌ಲೈನ್ ಅಳವಡಿಸಲು ರಸ್ತೆ ಅಗೆದ ಬಳಿಕ ಮರು ಡಾಂಬರೀಕರಣ ಮಾಡದೆ ಬಿಟ್ಟಿರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಇನ್ನೂ ಅನೇಕ ಗ್ರಾಮಗಳಲ್ಲಿ ನೀರಿನ ಟ್ಯಾಂಕ್ ನಿರ್ಮಾಣವಾಗಿಲ್ಲ. ಪಿಡಿಒಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿಯ ಗುಣಮಟ್ಟ ಕುಸಿದಿದೆ ಎಂಬ ಆರೋಪ ಇದ್ದು ಸರಿಪಡಿಸಬೇಕು. ಯಾವುದೇ ಕಾಮಗಾರಿ ಸ್ಥಳ ಪರಿಶೀಲಿಸದೆ ಹಸ್ತಾಂತರಿಸಬಾರದು. ಗುಣಮಟ್ಟದ ಮಾನದಂಡ ಪೂರೈಸದ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಬಿಲ್ ಪಾವತಿಸಲಾಗುವುದಿಲ್ಲ. ಬಿಲ್ ಪಾವತಿಗೆ ತಾತ್ಕಾಲಿಕ ತಡೆ ನೀಡಿದ್ದು, ಲಿಖಿತ ದೂರುಗಳ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ನೀರಿನ ಸಮಸ್ಯೆ ತೀವ್ರವಾಗಿರುವ ಪ್ರದೇಶಗಳಲ್ಲಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕಾಮಗಾರಿಗಳ ಸಮಗ್ರ ಪರಿಶೀಲನೆ ನಡೆಸಿ ಲೋಪ ಕಂಡುಬಂದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು, ಕೆಡಿಪಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net