ಮಾಲೆಕಲ್ ತಿರುಪತಿ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿದರು. ಮನು ಕುಮಾರ್, ಸಂತೋಷ್ ಕುಮಾರ್, ಕಿರಣ್ ಕುಮಾರ್, ಲೋಕೇಶ್, ಉಮಾಶಂಕರ್, ಮಂಜುನಾಥ್ ಇತರರು ಇದ್ದರು.
ಅರಸೀಕೆರೆ ಗ್ರಾಮಾಂತರ : ಕಾವೇರಿ ನದಿ ನೀರಿನ ಹಂಚಿಕೆ ವಿವಾದವನ್ನು ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಪರಸ್ಪರ ಚರ್ಚಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಒಳಿತು ಎಂದು ಕರವೇ ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಭಾನುವಾರ ಸಲಹೆ ನೀಡಿದರು.
ಮಾಲೆ ಕಲ್ಲು ಅಮರಗಿರಿ ತಿರುಪತಿಯ ಜಾತ್ರಾ ಮಹೋತ್ಸವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿರುವ ಈಗಿನ ಪರಿಸ್ಥಿತಿ, ಮಳೆ ಮತ್ತು ಅಣೆಕಟ್ಟೆಗಳ ನೀರಿನ ಸ್ಥಿತಿಗತಿ ನೋಡಿದರೆ ತಮಿಳುನಾಡಿಗೆ ಸದ್ಯಕ್ಕೆ ನೀರು ಬಿಡಲು ಆಗುವುದಿಲ್ಲ. ಈ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ಸರಿಯಾಗಿದೆ ಎಂದರು.
ಶೀಘ್ರವೇ ಎರಡೂ ರಾಜ್ಯಗಳ ಸಿಎಂಗಳು ಮುಖಾಮುಖಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಆ ಸಂದರ್ಭದಲ್ಲಿ ಪರಸ್ಪರ ಮಾತುಕತೆ ನಡೆಯಲಿ, ಸಮರ್ಪಕ ಮಳೆಯಾಗದೆ ಕರ್ನಾಟಕದ ಡ್ಯಾಂಗಳಲ್ಲಿ ನೀರಿಲ್ಲದ ಕಾರಣ ಪ್ರತಿವರ್ಷ 205 ಟಿಎಂಸಿ ನೀರು ಹರಿಸಬೇಕು ಎಂಬ ಆದೇಶವಿದ್ದರೂ, ಈಗ ನೀರು ಹರಿಸುವುದು ಅಸಾಧ್ಯ ಎಂದರು.
ಮುಂದಿನ ದಿನಗಳಲ್ಲಿ ನೀರು ಹೇಗೆ ಬಳಕೆ ಮಾಡಬೇಕು? ಎಂಬುದರ ಬಗ್ಗೆ ಚರ್ಚೆ ಆಗಲಿ. ಈ ಮೂಲಕ ಹಲವು ವರ್ಷಗಳ ವಿವಾದ ಬಗೆಹರಿದರೆ ಒಳಿತು, ಏಕೆಂದರೆ ಇದು ಮುಂದಿನ ಪೀಳಿಗೆಗೆ ಶಾಪ ಆಗಬಾರದು. ಆದಷ್ಟು ಬೇಗ ವಿವಾದ ಬಗೆಹರಿದರೆ, ಒಳ್ಳೆಯದಾಗಲಿದೆ. ಈ ನಿಟ್ಟಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ವಿಜಯ್ ಅವರು ಯೋಚಿಸಲಿ ಎಂದರು.
ಕರವೇ ಬೆಂಬಲ: ಇದೇ ವೇಳೆ ನೀಟ್ ಹಗರಣ ಕುರಿತು ಮಾತನಾಡಿ, ಈ ಹಗರಣ ನಡೆಯಬಾರದಿತ್ತು. 21 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದು ವಿಷಾದನೀಯ. ಕೇಂದ್ರ ಸರ್ಕಾರ ಕೂಡಲೇ ಯಾರೆಲ್ಲ ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತ ಮಕ್ಕಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕರಾವೇ ಜಿಲ್ಲಾ ಅಧ್ಯಕ್ಷ ಮೋಹನ್, ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ನಗರ ಅಧ್ಯಕ್ಷ ಸಂತೋಷ್,ಕಾರವೇ ಮುಖಂಡರಾದ ತುಳಸಿದಾಸ್ ಉಮಾಶಂಕರ್, ಮಂಜುನಾಥ್, ರಘು ಇತರರು ಇದ್ದರು.