ಅರಕಲಗೂಡು ತಾಲೂಕು ಚಿಕ್ಕಬೊಮ್ಮನಹಳ್ಳಿ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಸಿ. ರಂಗಸ್ವಾಮಿ, ಗುಂಡುರಾಜ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಎ.ಟಿ. ರಾಮಸ್ವಾಮಿ, ಪ್ರೊ. ಕೃಷ್ಣೇಗೌಡ ಇತರರು ಇದ್ದರು.
ಭಕ್ತಿ, ಸೇವೆಗೆ ಬದುಕು ಮುಡುಪಾಗಿಟ್ಟು ಮುಕ್ತಿ ಮಾರ್ಗ ಕಂಡುಕೊಳ್ಳಿ
ಅರಕಲಗೂಡು: ಮನುಷ್ಯ ಪರಿಶುದ್ಧವಾದ ಭಾವನೆ ಬೆಳೆಸಿಕೊಂಡು ಭಕ್ತಿ ಮತ್ತು ಸೇವೆಗೆ ಬದುಕು ಮುಡುಪಾಗಿಟ್ಟು ಮುಕ್ತಿ ಮಾರ್ಗ ಕಂಡುಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಕುಂದೂರು ಆದಿಚುಂಚನಗಿರಿ ಮಠದ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಈ ಜಗತ್ತಿನ ಜಾತ್ರೆಯಲ್ಲಿ ಸಿಲುಕಿ ಆಸ್ತಿ, ಅಧಿಕಾರ, ಶ್ರೀಮಂತಿಕೆ ಗಳಿಸಿದ ಮನುಷ್ಯನಿಗೆ ನಮ್ಮೊಳಗಿರುವ ಜ್ಞಾನದ ಇರುವಿಕೆ ಅರಿತಾಗ ಮಾತ್ರ ನೆಮ್ಮದಿ ಸಾಧ್ಯ. ಅಜ್ಞಾನಿಗಳಾಗದೆ, ಅನವಶ್ಯಕ ಆಗಿರುವುದೆಲ್ಲ ತೊರೆದು ಪ್ರಜ್ಞೆ ತುಂಬಿಕೊಳ್ಳಬೇಕು. ಕರ್ಮ ಯಾವುದಿರಲಿ, ತ್ಯಾಗಮಯಿಯಾಗಿ ನಮ್ಮೊಳಗಿರುವ ಸತ್ಯ ಕಾಣಬೇಕು. ಮೋಹ ಮಾಯೆಯ ಪರದೆ ಸರಿಸಿ ಪರಿಶುದ್ಧ ಮನಸ್ಸಿನಲ್ಲಿ ಭಕ್ತಿ, ಜ್ಞಾನ ಗಳಿಸಿ ಸನ್ಮಾರ್ಗದಲ್ಲಿ ಮುನ್ನಡೆದರೆ ಜನ್ಮಾಂತರಗಳ ಸ್ವರ್ಗ ಸುಖ ಪ್ರಾಪ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹಾಸನ-ಕೊಡಗು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಧರ್ಮದ ಬುತ್ತಿ ಕಟ್ಟಿಕೊಂಡು ಸತ್ಕಾರ್ಯಗಳನ್ನು ಮಾಡುವುದೇ ಪುಣ್ಯದ ಕಾಯಕ. ಇದಕ್ಕೆಲ್ಲ ಗುರುವಿನ ಮಾರ್ಗದರ್ಶನ ಬೇಕು. ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧಿಪತಿ ದರ್ಶನ, ಆಶೀರ್ವಾದ ಬದುಕಿನ ಉನ್ನತಿಗೆ ದಾರಿದೀಪ ಎಂದು ನುಡಿದರು.
ಸಮಾರಂಭವನ್ನು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳಲ್ಲಿ ಇಂದು ಸಾಮರಸ್ಯ, ಬಂಧುತ್ವದ ಕೊರತೆ ಕಾಡುತ್ತಿದ್ದು ಧರ್ಮ, ಮೋಕ್ಷದ ಹಾದಿ ಕ್ಷೀಣಿಸುತ್ತಿದೆ. ಹಣ, ಆಸ್ತಿಗಾಗಿ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ನಿತ್ಯದ ಬದುಕಿನ ಜಂಜಾಟಗಳ ಗೊಡವೆ ಇಲ್ಲದ ಪಕ್ಷಿಗಳು ಸ್ವಚ್ಛಂದವಾಗಿ ಒಗ್ಗೂಡಿ ಆನಂದಮಯವಾಗಿ ಜೀವಿಸುತ್ತಿದ್ದು ಮನುಷ್ಯನಿಗೆ ಹೋಲಿಸಿದರೆ ಮೂಕ ಹಕ್ಕಿಗಳೇ ಮೇಲು. ಅರಿವಿನ ಕೊರತೆ ನೀಗಿಸಿಕೊಂಡು ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಪ್ರೊ. ಕೃಷ್ಣೇಗೌಡ ಮಾತನಾಡಿ, ಸಂತರು ಎಲ್ಲರನ್ನೂ ಒಳ್ಳೆಯವರನ್ನಾಗಿಯೇ ನೋಡುತ್ತಾರೆ. ನಾನತ್ವದ ಅಹಂ ಕಳಚಿ ಗುರು ದರ್ಶನಕ್ಕೆ ಪಾತ್ರರಾಗುವ ಮೂಲಕ ನಾವೆಲ್ಲ ಜ್ಞಾನಿಗಳಾಗಬೇಕು ಎಂದು ಸಲಹೆ ನೀಡಿದರು.
ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಮುಳ್ಳೂರು ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಮನೇಹಳ್ಳಿ ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ಸಿಡಿಗಳಲೆ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಮುಖಂಡರಾದ ಚೌಡೇಗೌಡ, ಭರತ್‌ಗೌಡ, ಮುರುಳೀಧರ್, ಅಣ್ಣೇಗೌಡ, ಮಹಾದೇವು, ಕೋಡಿಗೌಡ, ಹೊಡೆನೂರು ಮಹೇಶ್ ಇತರರಿದ್ದರು.
2025ನೇ ಸಾಲಿನ ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಗತಿಪರ ಕೃಷಿಕ ಡಾ. ಎಂ.ಸಿ. ರಂಗಸ್ವಾಮಿ ಹಾಗೂ ಬಯಲಾಟ ಕ್ಷೇತ್ರದ ಗುಂಡೂರಾಜ್ ಅವರನ್ನು ಸನ್ಮಾನಿಸಲಾಯಿತು. ಮಠದ ಕಾರ್ಯಗಳಿಗೆ ಸಹಕರಿಸಿದ ಭಕ್ತರಾದ ಜಿಪಂ ಮಾಜಿ ಸದಸ್ಯ ಅಪ್ಪಣ್ಣ, ಹಂಡ್ರಂಗಿ ಚನ್ನರಾಜು, ನರಸಿನಕುಪ್ಪೆ ದ್ಯಾವಪ್ಪಗೌಡ, ಅರಕಲಗೂಡು ಸುಬ್ಬೇಗೌಡ, ಬೊಮ್ಮನಹಳ್ಳಿ ಕೃಷ್ಣ ದಂಪತಿಯನ್ನು ಗೌರವಿಸಲಾಯಿತು. ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಮುತ್ತಿನ ಪಲ್ಲಕ್ಕಿಯಲ್ಲಿ ವೈಭವೋಪೇತ ಮೆರವಣಿಗೆ
ಚಿಕ್ಕಬೊಮ್ಮನಹಳ್ಳಿ ಸುಕ್ಷೇತ್ರಕ್ಕೆ ಆಗಮಿಸಿದ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ವಿವಿಧ ಮಂಗಳವಾದ್ಯ, ಪೂಜಾ ಕುಣಿತ, ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಮುತ್ತಿನ ಪಲ್ಲಕ್ಕಿಯಲ್ಲಿ ವೈಭವೋಪೇತ ಮೆರವಣಿಗೆ ಮೂಲಕ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಕರೆತರಲಾಯಿತು. ಶ್ರೀಗಳು ದೇವಾಲಯದಲ್ಲಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ದೇವರ ದರ್ಶನ ಪಡೆದರು.