ಸಾಂಸ್ಕೃತಿಕ ಉತ್ಸವಗಳು ನಿತ್ಯೋತ್ಸವವಾಗಲಿ

ಹೊಯ್ಸಳ ಉತ್ಸವಕ್ಕೆ ಪರ್ಯಾಯವಾಗಿ ಶಾಂತಲಾ ಉತ್ಸವ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಸೋಮವಾರ ಸಂಜೆ ಕಲಾ ತಂಡಗಳ ಮೆರವಣಿಗೆಯೊಂದಿಗೆ ಸಡಗರ ಸಂಭ್ರಮದ ಚಾಲನೆ ದೊರಕಿತು.
ಹೊಯ್ಸಳ ಉತ್ಸವಕ್ಕೆ ಪರ್ಯಾಯವಾಗಿ ಶಾಂತಲಾ ಉತ್ಸವ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಸೋಮವಾರ ಸಂಜೆ ಕಲಾ ತಂಡಗಳ ಮೆರವಣಿಗೆಯೊಂದಿಗೆ ಸಡಗರ ಸಂಭ್ರಮದ ಚಾಲನೆ ದೊರಕಿತು.
Published on

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಮತ

ಹಳೇಬೀಡು: ಸರ್ಕಾರದ ನಿರ್ಲಕ್ಷ್ಯದ ಕಾರಣ ದಶಕದಿಂದ ಸ್ಥಗಿತಗೊಂಡಿರುವ ಹೊಯ್ಸಳ ಉತ್ಸವಕ್ಕೆ ಪರ್ಯಾಯವಾಗಿ ಸ್ಥಳೀಯರೇ ಆಸಕ್ತಿ ವಹಿಸಿ ನಡೆಸುತ್ತಿರುವ ಶಾಂತಲಾ ಉತ್ಸವವು ಯಶಸ್ವಿಯಾಗಿ ನಡೆಯಲಿ. ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿರುವ ಆಳ್ವಾಸ್ ಸಾಂಸ್ಕೃತಿಕ ಪ್ರತಿಷ್ಠಾನವು ಇನ್ನಷ್ಟು ಎತ್ತರಕ್ಕೆ ಬೆಳೆದು ಉತ್ತಮ ಸಂಸ್ಥೆಯಾಗಲಿ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಸಿದರು.
ಹಳೇಬೀಡಿನ ಕೆ.ಪಿ.ಎಸ್. ಶಾಲಾ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಶಾಂತಲಾ ಉತ್ಸವ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಹೊಯ್ಸಳ ರಾಜ ಮನೆತನದ ರಾಜಧಾನಿಯಾಗಿ ಮೆರೆದ ನಾಡಿನಲ್ಲಿ ಅವರ ಹೆಸರನ್ನು ಸದಾ ಸ್ಮರಿಸುವ ಕಾರ್ಯಕ್ರಮಗಳು ನಡೆಯಬೇಕು. ಸರ್ಕಾರಗಳು ನಿರ್ಲಕ್ಷ ವಹಿಸಿರುವ ಕಾರಣ ಈ ಬಾರಿ ಸ್ಥಳೀಯ ಮುಖಂಡರ ಮುಂದಾಳತ್ವದಲ್ಲಿ ಶಾಂತಲಾ ಉತ್ಸವವನ್ನು ನಡೆಸುತ್ತಿರುವುದು ಅಭಿನಂದನೀಯವಾಗಿದೆ. ಇಂತಹ ಸಾಂಸ್ಕೃತಿಕ ಉತ್ಸವಗಳನ್ನು ವರ್ಷಕ್ಕೊಮ್ಮೆ ಮಾತ್ರ ಆಯೋಜಿಸದೆ ನಿತ್ಯೋತ್ಸವವಾಗಿ ನಡೆಸಬೇಕು ಎಂದರು.
ಸ್ಥಳೀಯರ ಆಶಯಕ್ಕೆ ಪೂರಕವಾಗಿ ಸಹಕರಿಸುತ್ತಿರುವ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವಾ ಅವರಿಗೆ ಈ ಭಾಗದ ಜನರು ಕೃತಜ್ಞರಾಗಿರಬೇಕು. ಮಂಗಳವಾರ ಸಂಜೆ ಸುಮಾರು ಮೂರೂವರೆ ಗಂಟೆ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳುವ ಸದವಕಾಶ ನಮಗೆ ಒದಗಿ ಬಂದಿದೆ. ಇಂತಹ ಉತ್ತಮ ಕಾರ್ಯಕ್ರಮವು ಸರ್ಕಾರದ ನೆರವಿಲ್ಲದೆ ನಡೆಯುತ್ತಿರುವುದು ಮಹತ್ವದ ಸಂಗತಿ. ಕಾರ್ಯಕ್ರಮದ ಆಯೋಜನೆಗಾಗಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.
ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ, ಹಂಪಿ ಉತ್ಸವದ ಮಾದರಿಯಲ್ಲಿ ಪ್ರತಿವರ್ಷ ಸರ್ಕಾರವೇ ಹೊಯ್ಸಳ ಉತ್ಸವವನ್ನು ಆಯೋಜಿಸಬೇಕು. ಆ ನಿಟ್ಟಿನಲ್ಲಿ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಿ ಸರ್ಕಾರದ ಮೇಲೆ ಒತ್ತಡವನ್ನು ತಂದು ಉತ್ಸವ ಆಚರಣೆ ಆರಂಭವಾಗಲು ಕಾರಣರಾಗಬೇಕು. ಪ್ರಸ್ತುತ ಶಾಂತಲಾ ಉತ್ಸವಕ್ಕೆ ಸಹಕರಿಸುತ್ತಿರುವ ಆಳ್ವಾಸ್ ಪ್ರತಿಷ್ಠಾನಕ್ಕೆ ನಾವು ಚಿರ ಋಣಿಯಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಮಹಾನ್ ಕಲಾವಿದೆಯಾಗಿದ್ದ ಪಟ್ಟದರಾಣಿ ಶಾಂತಲೆಯ ಸ್ಮರಣಾರ್ಥವಾಗಿ ನಾವು ಈ ಸಾಂಸ್ಕೃತಿಕ ಉತ್ಸವಕ್ಕೆ ಆಕೆಯ ಹೆಸರನ್ನು ಇಟ್ಟಿದ್ದೇವೆ ಎಂದರು.
ಗ್ರಾಪಂ ಅಧ್ಯಕ್ಷ ಮಧು, ಮುಖಂಡರಾದ ಈ.ಎಚ್.ಲಕ್ಷ್ಮಣ್, ಅಡಗೂರು ಬಸವರಾಜ್, ರೈತ ಮುಖಂಡ ಗಡಿ ಕುಮಾರ್, ಗಂಗೂರು ಶಿವಕುಮಾರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net