ಮಕ್ಕಳು ಶಿಕ್ಷಣದೊಂದಿಗೆ ಪ್ರಪಂಚದ ಜ್ಞಾನ ಅರಿಯಲಿ

ಚನ್ನರಾಯಪಟ್ಟಣದ ನವೋದಯ ವಿದ್ಯಾಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಆಹಾರ ಮೇಳಕ್ಕೆ ಬಾಲಕೃಷ್ಣ ಚಾಲನೆ ನೀಡಿದರು. ಜಿ.ಎಸ್.ಶಂಕರಪ್ಪ, ಸಿ.ಜೆ.ಮಂಜುನಾಥ್, ಕೆ.ಪಿ.ಶರತ್, ಕೆ.ಎನ್.ಅನಿಲ್ ಇತರರಿದ್ದರು.
ಚನ್ನರಾಯಪಟ್ಟಣದ ನವೋದಯ ವಿದ್ಯಾಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಆಹಾರ ಮೇಳಕ್ಕೆ ಬಾಲಕೃಷ್ಣ ಚಾಲನೆ ನೀಡಿದರು. ಜಿ.ಎಸ್.ಶಂಕರಪ್ಪ, ಸಿ.ಜೆ.ಮಂಜುನಾಥ್, ಕೆ.ಪಿ.ಶರತ್, ಕೆ.ಎನ್.ಅನಿಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ
  • ನವೋದಯ ವಿದ್ಯಾಸಂಘದ ಸಹಯೋಗ
  • ನವೋದಯ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ
ಚನ್ನರಾಯಪಟ್ಟಣ: ಶಾಲಾ, ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ವ್ಯಾಪಾರ-ವಹಿವಾಟು, ಹಣದ ಲೆಕ್ಕಾಚಾರ, ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಸೇರಿದಂತೆ ಇತರ ವಿಚಾರಗಳನ್ನು ತಿಳಿದುಕೊಳ್ಳಬೇಕಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ನವೋದಯ ವಿದ್ಯಾಸಂಘದ ಸಹಯೋಗದಲ್ಲಿ ನವೋದಯ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಪಟ್ಟಣದ ನವೋದಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಪಾಠ ಪ್ರವಚನಕ್ಕೆ ಸೀಮಿತವಾಗಬಾರದು. ಬದಲಾಗಿ ಪ್ರಾಪಂಚಿಕ ಜ್ಞಾನವನ್ನು ಅರಿಯುವಂತಾಗಬೇಕು ಎಂದರು.
ಆಹಾರ ಮೇಳ ಆಯೋಜನೆಯಿಂದ ಮಕ್ಕಳಿಗೆ ತರಕಾರಿ ಹಾಗೂ ಆಹಾರದ ಬಗ್ಗೆಯೂ ವಿಶೇಷ ಆಸಕ್ತಿ ಮೂಡಲಿದೆ. ಮಕ್ಕಳಿಗೆ ವ್ಯವಹಾರ ಜ್ಞಾನದ ಜತೆಗೆ ಅಡುಗೆ ಮಾಡುವ ಬಗ್ಗೆ ಪ್ರಾಯೋಗಿಕವಾಗಿ ತಿಳಿವಳಿಕೆ ಮೂಡಲಿದೆ. ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಪಾಲಕರು ಅಡುಗೆ ಮಾಡುವಾಗ ಮಕ್ಕಳು ಸಹಾಯ ಮಾಡುವ ಮನೋಭಾವ ಬೆಳೆಯುತ್ತದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಲೆಕ್ಕಾಚಾರ ಹಾಗೂ ಸಾಮಾನ್ಯಜ್ಞಾನದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿ. ಆಹಾರ ಪದಾರ್ಥಗಳ ತಯಾರಿಕೆ, ಮಾರಾಟ, ಲಾಭ, ನಷ್ಟ, ಆಹಾರ ಪದ್ಧತಿ ಹಾಗೂ ಶುಚಿತ್ವದ ಬಗ್ಗೆ ತಿಳಿವಳಿಕೆ ಮೂಡಿಸಲಿದೆ. ಜತೆಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಫಾಸ್ಟ್‌ಫುಡ್ ತಿನಿಸುಗಳು, ವಿವಿಧ ಬಗೆಯ ಹಣ್ಣುಗಳ ಜ್ಯೂಸ್ ಅಂಗಡಿ, ಮಂಡಾಳು ಒಗ್ಗರಣಿ, ಮಿರ್ಚಿ ಬಜ್ಜಿ, ಬದನೆಕಾಯಿ ಬಜ್ಜಿ, ಗೋಬಿ ಮಂಚೂರಿ, ನೂಡಲ್ಸ್, ಸ್ವೀಟ್ಸ್, ನಾನಾ ಬಗೆಯ ಹಪ್ಪಳ, ಸಂಡಿಗೆ ಸೇರಿದಂತೆ ನಾಡಿನ ನಾನಾ ಭಾಗದಲ್ಲಿನ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಜನರಿಗೆ ಲಭ್ಯವಾಗುವಂತೆ ಆಹಾರ ಮೇಳದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಮಳಿಗೆಗಳಲ್ಲಿ ಮಕ್ಕಳು ತಿಂಡಿ ತಿನಿಸುಗಳಿಗೆ ಮುಗಿಬಿದ್ದು ಸಂಭ್ರಮಿಸಿದರು.
ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ನವೋದಯ ವಿದ್ಯಾಸಂಸ್ಥೆ ಸಂಘದ ಅಧ್ಯಕ್ಷ ಸಿ.ಜೆ.ಮಂಜುನಾಥ್, ಗೌರವಾಧ್ಯಕ್ಷ ಸಿ.ಎಸ್.ಶೇಷಶಯನ, ಉಪಾಧ್ಯಕ್ಷ ಡಾ.ಎಸ್.ಪ್ರಮೋದ್, ಕಾರ್ಯದರ್ಶಿ ಕೆ.ಪಿ.ಶರತ್, ಕೋಶಾಧ್ಯಕ್ಷ ಜಲೇಂದ್ರ ಕುಮಾರ್, ನಿರ್ದೇಶಕ ಆನಂದ್ ಕಾಳೇನಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net