ನೆಮ್ಮದಿ ಜೀವನ ನಡೆಸಲು ಕಾನೂನು ಅರಿವು ಅಗತ್ಯ

ಚನ್ನರಾಯಪಟ್ಟಣದ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮವನ್ನು  ಎ.ಅರುಣಾಕುಮಾರಿ ಉದ್ಘಾಟಿಸಿದರು. ಡಾ.ಪಿ.ತೇಜಸ್ವಿನಿ, ಎಚ್.ಎನ್.ದೀಪಾ, ಎನ್.ಸಿ.ಬಿ. ಹೇಮಂತ್‌ಕುಮಾರ್, ಸಿ.ಜೆ.ಮಂಜುನಾಥ್, ಕೆ.ಪಿ.ಶರತ್ ಇತರರಿದ್ದರು.
ಚನ್ನರಾಯಪಟ್ಟಣದ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮವನ್ನು ಎ.ಅರುಣಾಕುಮಾರಿ ಉದ್ಘಾಟಿಸಿದರು. ಡಾ.ಪಿ.ತೇಜಸ್ವಿನಿ, ಎಚ್.ಎನ್.ದೀಪಾ, ಎನ್.ಸಿ.ಬಿ. ಹೇಮಂತ್‌ಕುಮಾರ್, ಸಿ.ಜೆ.ಮಂಜುನಾಥ್, ಕೆ.ಪಿ.ಶರತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಾಕುಮಾರಿ
  • ನವೋದಯ ಸಭಾಂಗಣ
ಚನ್ನರಾಯಪಟ್ಟಣ: ಸಂವಿಧಾನದಲ್ಲಿನ ಎಲ್ಲ ಕಾನೂನನ್ನು ತಿಳಿಯಲು ಸಾಧ್ಯವಿಲ್ಲ. ಆದರೆ ನಿತ್ಯದ ಚಟುವಟಿಕೆಗಳನ್ನು ನೆಮ್ಮದಿಯಾಗಿ ನಡೆಸಲು ಕಾನೂನು ಅರಿವು ಪಡೆಯುವುದು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಾಕುಮಾರಿ ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನವೋದಯ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಪಟ್ಟಣದ ನವೋದಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಮತ್ತು ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಿದೆ. ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲ ಹಕ್ಕು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ. ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜಾಗೃತಿ ಪಡೆಯಬೇಕು. ಈಗ ಮನೆ ಬಾಗಿಲಿಗೆ ಜನಸಾಮಾನ್ಯರ ಅನೂಕೂಲಕ್ಕಾಗಿ ಕಾನೂನು ಅರಿವು ನೆರವನ್ನು ತಲುಪಿಸಲಾಗುತ್ತಿದೆ ಎಂದರು.
ಚನ್ನರಾಯಪಟ್ಟಣ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಎನ್.ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿಯೇ ಕಾನೂನಿನ ಅರಿವು ಬೆಳೆಸಿಕೊಂಡರೆ ಅಪರಾಧಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅಪರಿಚಿತರಿಂದ ಬರುವ ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು. ಸಂಚಾರ ನಿಯಮಗಳನ್ನು ಪಾಲಿಸುವುದು ಕೇವಲ ದಂಡದ ಭಯಕ್ಕಲ್ಲ, ಅದು ಜೀವದ ರಕ್ಷಣೆಗಾಗಿ ಎಂದು ತಿಳಿಸಿದರು.
ವಿದ್ಯಾರ್ಥಿಗಳು ದುಶ್ಚಟಗಳಲ್ಲಿ ತೊಡಗಿಸಿಕೊಳ್ಳದೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಬೇಕು. ಗಾಂಜ ಸೇವನೆ ಮಾಡುವುದರಿಂದ ಏನೆಲ್ಲ ತೊಂದರೆ, ಅಪರಾಧ ಹಾಗೂ ಶಿಕ್ಷೆ ಆಗುತ್ತದೆ ಎಂಬುದರ ಕುರಿತು ಅರಿವು ಹೊಂದಬೇಕು. ಜತೆಗೆ ಹೊಸ ಕಾನೂನನ್ನು ತಿಳಿಯುವಂತಾಗಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ತೇಜಸ್ವಿನಿ ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ವಿದ್ಯಾರ್ಥಿಗಳ ಮೇಲೆ ಧ್ವಂದ್ವ ಪರಿಣಾಮ ಬೀರಲಿದೆ. ಮಾಹಿತಿ ಮತ್ತು ಜ್ಞಾನದ ವೃದ್ಧಿಗೆ ನೆರವಾಗುವಂತೆಯೇ ಅತಿಯಾದ ಬಳಕೆಯಿಂದ ನಿದ್ರಾಹೀನತೆ, ಕಣ್ಣಿನ ಸಮಸ್ಯೆ, ಮಾನಸಿಕ ಖಿನ್ನತೆ, ನಿದ್ರಾಹೀನತೆ, ದೈಹಿಕ ಚಟುವಟಿಕೆಗಳ ಕೊರತೆಯಿಂದ ಬೊಜ್ಜು ಉಂಟಾಗಬಹುದು. ಸಮಯ ವ್ಯರ್ಥ, ಸೈಬರ್‌ಬೆದರಿಕೆ, ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಜತೆಗ ವಾಸ್ತವಿಕ ಸಂಬಂಧಗಳಿಂದ ಯುವಕರನ್ನು ದೂರವಿಟ್ಟು, ವರ್ಚುವಲ್ ಜಗತ್ತಿನಲ್ಲಿ ಬದುಕುವಂತೆ ಪ್ರೇರೇಪಿಸುತ್ತಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೊಡಿಸಿಕೊಂಡು ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡದೆ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವ ಮೂಲಕ ಹೆತ್ತವರಿಗೂ ಕೀರ್ತಿ ತರುವಂತಾಗಬೇಕು ಎಂದು ತಿಳಿಸಿದರು.
ಸಂಚಾರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಬಿ.ಎಂ.ಚರಣ್‌ಗೌಡ ಮಾತನಾಡಿ, ವಿದ್ಯಾರ್ಥಿಗಳು ಸೇರಿದಂತೆ 18 ವರ್ಷದೊಳಗಿನ ಮಕ್ಕಳು ಯಾವುದೇ ವಾಹನವನ್ನು ಓಡಿಸುವುದು ಕಾನೂನಿನ ಪ್ರಕಾರ ಅಪರಾಧ. ವಾಹನ ಸವಾರರು ಕಡ್ಡಾಯವಾಗಿ ಡಿಎಲ್ ಮಾಡಿಸಿಕೊಂಡು ಓಡಿಸಬೇಕು. ದ್ವಿಚಕ್ರ ವಾಹನ ಸೇರಿದಂತೆ ಪ್ರತಿ ವಾಹನಕ್ಕೆ ಕಡ್ಡಾಯವಾಗಿ ವಾಹನ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರನೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರೂ ಕಾನೂನು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ. ಇದರಿಂದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದ ಹೇಳಿದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಸಿ.ಬಿ.ಹೇಮಂತ್‌ಕುಮಾರ್ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ನಗರ ಠಾಣಾ ವೃತ್ತ ನಿರೀಕ್ಷಕ ರಘುಪತಿ ಮಾತನಾಡಿದರು. ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜೆ.ಮಂಜುನಾಥ್, ಗೌರವಾಧ್ಯಕ್ಷ ಸಿ. ಎಸ್.ಶೇಷಶಯನ, ಕಾರ್ಯದರ್ಶಿ ಕೆ.ಪಿ.ಶರತ್, ಸಹ ಕಾರ್ಯದರ್ಶಿ ಎಂ.ಎನ್.ಸಂತೋಷ್, ಕೋಶಾಧ್ಯಕ್ಷ ಜಲೇಂದ್ರ ಕುಮಾರ್, ನಿರ್ದೇಶಕರಾದ ಗನ್ನಿಗಿರೀಶ್, ಆನಂದ್ ಕಾಳೇನಹಳ್ಳಿ ಇತರರಿದ್ದರು.
ಚಿತ್ರ ಶೀರ್ಷಿಕೆ 05 ಸಿಆರ್‌ಪಿ-1ಎ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net