ಕಬ್ಬಿದ ಸೇತುವೆಗೆ ನಿರ್ವಹಣೆ ಕೊರತೆ

ಕಬ್ಬಿಣದ ಸೇತುವೆ ಮೇಲೆ ನಿರ್ಮಾಣಗೊಂಡಿರುವ ಪಾದಚಾರಿ ರಸ್ತೆ ದುಸ್ಥಿತಿ ಹಾಗೂ ಕಬ್ಬಿಣದ ಸೇತುವೆ.
ಕಬ್ಬಿಣದ ಸೇತುವೆ ಮೇಲೆ ನಿರ್ಮಾಣಗೊಂಡಿರುವ ಪಾದಚಾರಿ ರಸ್ತೆ ದುಸ್ಥಿತಿ ಹಾಗೂ ಕಬ್ಬಿಣದ ಸೇತುವೆ.
Published on
ಸಕಲೇಶಪುರ: ಪಟ್ಟಣದ ಹೇಮಾವತಿ ನದಿಗೆ ನಿರ್ಮಿಸಿರುವ ಕಬ್ಬಿಣದ ಸೇತುವೆ ನಿರ್ವಹಣೆ ಕೊರತೆಯಿಂದ ನಲುಗುತ್ತಿದೆ.
1860 ದಶಕದಲ್ಲಿ ಬ್ರಿಟಿಷರು ಲಂಡನ್‌ನಿಂದ ಕಬ್ಬಿಣ ರಪ್ತು ಮಾಡಿಕೊಳ್ಳುವ ಮೂಲಕ ಹೇಮಾವತಿ ನದಿಗೆ ಅತ್ಯದ್ಭುತವಾದ ಎರಡು ಪಥದ ಕಬ್ಬಿಣದ ಸೇತುವೆ ನಿರ್ಮಾಣ ಮಾಡಿದ್ದರು.
ಸೇತುವೆ ನಿರ್ಮಾಣಗೊಂಡ ನಂತರ ತಾಲೂಕಿನಲ್ಲಿ ಸಾಕಷ್ಟು ಕಾಫಿ ತೋಟಗಳು ನಿರ್ಮಾಣಗೊಂಡರೆ, ಪಟ್ಟಣದಲ್ಲಿ ಹಲವು ಕಟ್ಟಡಗಳು ತಲೆ ಎತ್ತಿದ್ದಲ್ಲದೆ ಕರಾವಳಿ ಒಳನಾಡಿಗೂ ಸಾರಿಗೆ ಸೌಕರ್ಯ ಏರ್ಪಟ್ಟಿತ್ತು.
ಶತಮಾನಗಳ ಕಾಲ ಕರಾವಳಿ ಹಾಗೂ ಒಳನಾಡಿನ ಕೊಂಡಿಯಾಗಿದ್ದ ಕಬ್ಬಿಣದ ಸೇತುವೆ ಬೃಹತ್ ವಾಹನಗಳ ಸಂಚಾರಕ್ಕೆ ಸರಿಯಲ್ಲ ಎಂಬ ಕಾರಣದಿಂದ 1960ರ ದಶಕದಲ್ಲಿ ಹೇಮಾವತಿ ನದಿಗೆ ಮತ್ತೊಂದು ಸೇತುವೆ ನಿರ್ಮಾಣ ಮಾಡಿದ ಪರಿಣಾಮ ಅರ್ಧ ಶತಮಾನದಿಂದ ಸೇತುವೆ ನಿರುಪಯುಕ್ತವಾಗಿದೆ.
ನಿರುಪಯೋಗಿಯಾಗಿದ್ದ ಸೇತುವೆಯನ್ನು ಕೇಂದ್ರ ಸರ್ಕಾರದಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿದ್ದ ಬೈಕೆರೆ ನಾಗೇಶ್, ಕಬ್ಬಿಣ ಸೇತುವೆಯ ಒಂದು ಪಥಕ್ಕೆ 2010ರಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಿಸಿ ಪಾದಚಾರಿ ಸಂಚಾರಕ್ಕೆ ಸಜ್ಜುಗೊಳಿಸಿದ್ದರು. ಹೊಸ ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿದ್ದ ಕಾರಣ ಸೇತುವೆಯ ಪಾದಚಾರಿ ಮಾರ್ಗದಲ್ಲಿ ಜನರು ನಿರ್ಭಯವಾಗಿ ಸಂಚರಿಸುತ್ತಿದ್ದರು.
ಹಾಗೆಯೇ, ಪಾದಚಾರಿ ಮಾರ್ಗದುದ್ದಕ್ಕೂ ಬೀದಿದೀಪ ಅಳವಡಿಸಿದ್ದರಿಂದ ರಾತ್ರಿ ವೇಳೆಯೂ ನಿರ್ಭಯವಾಗಿ ಸಂಚರಿಸಬಹುದಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಾದಚಾರಿ ಮಾರ್ಗದ ನಿರ್ವಹಣೆಯನ್ನು ಪುರಸಭೆ ಮರೆತಿರುವ ಕಾರಣ ರಸ್ತೆಯ ಎರಡೂ ಬದಿಯಲ್ಲಿ ಗಿಡಗಂಟಿ ಬೆಳೆದಿವೆ. ಈ ರಸ್ತೆ ಬಯಲು ಶೌಚಗೃಹವಾಗಿದೆ. ಬೀದಿದೀಪಗಳು ನಂದಿ ಹಲವು ವರ್ಷಗಳೇ ಕಳೆದಿದ್ದು, ಸರಿಪಡಿಸುವ ಗೋಜಿಗೆ ಪುರಸಭೆ ಮುಂದಾಗಿಲ್ಲ. ಇದರಿಂದಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿದ್ದ ಪಾದಚಾರಿ ರಸ್ತೆ ಸದ್ಯ ಉಪಯೋಗಕ್ಕೆ ಬಾರದಂತಾಗಿದೆ.
ಬ್ರಿಟಿಷರಿಂದ ನಿರ್ಮಾಣವಾದ ಕಬ್ಬಿಣದ ಸೇತುವೆ ಇಂದಿಗೂ ನೋಡುಗರ ಪಾಲಿಗೆ ಸೂಜಿಗದಂತಿದೆ. ಆದರೆ, ಸೇತುವೆಯ ಮೇಲ್ಭಾಗದಲ್ಲಿ ಬೆಳೆದಿರುವ ಮರಗಳು ಸೇತುವೆಯ ಅಸ್ತಿತ್ವಕ್ಕೆ ಕುತ್ತು ತರುತ್ತಿವೆ. ಸೇತುವೆ ನಿರ್ಮಾಣವಾದ ವೇಳೆ ಎರಡೂ ಬದಿಯಲ್ಲಿ ನಿರ್ಮಿಸಿದ್ದ ಕಟ್ಟೆಗಳು ಈಗಾಗಲೇ ಮರಗಳಿಂದಾಗಿ ವಿನಾಶದ ಹಂತ ತಲುಪಿದೆ. ಆದ್ದರಿಂದ ಈ ಸೇತುವೆಯನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಕಾಪಿಡಬೇಕು ಎಂಬ ಕೂಗು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಎತ್ತು, ಕುದುರೆಗಾಡಿ ಹಾಗೂ ಲಘು ವಾಹನಗಳ ಸಂಚಾರಕ್ಕೆ ನಿರ್ಮಾಣ ಮಾಡಿದ್ದ ಕಬ್ಬಿಣದ ಸೇತುವೆ ಬದಲಿಗೆ 1960ರ ದಶಕದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸೇತುವೆ ಭಾರಿ ವಾಹನಗಳ ಸಂಚಾರದ ವೇಳೆ ಅದರುವುದರಿಂದ ಭಯ ಸೃಷ್ಟಿಯಾಗುತ್ತಿತ್ತು. ಈ ಬಗ್ಗೆ ಹಲವು ದೂರುಗಳು ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಕೆಯಾದ ಕಾರಣ 2010 ಹಾಗೂ 2016ರಲ್ಲಿ ಎರಡು ಬಾರಿ ಸೇತುವೆಗೆ ಹೆಚ್ಚುವರಿ ಪಿಲ್ಲರ್ ಅಳವಡಿಸಿ ರಕ್ಷಣೆ ಮಾಡಲಾಗಿದೆ. ಆದರೂ ಈಗ ಮತ್ತದೆ ಸಮಸ್ಯೆ ಕಾಣಿಸಿಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net