ಕನ್ನಡ ಸಾಹಿತ್ಯದಲ್ಲಿ ಕುವೆಂಪು ನೆನಪು ಜೀವಂತ

ಬೇಲೂರಿನ ಸರ್ಕಾರಿ ನೌಕರರ ಸಂಘದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ತಾಲೂಕು ಜಾನಪದ ಪರಿಷತ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಅವರನ್ನು ಸನ್ಮಾನಿಸಲಾಯಿತು.
ಬೇಲೂರಿನ ಸರ್ಕಾರಿ ನೌಕರರ ಸಂಘದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ತಾಲೂಕು ಜಾನಪದ ಪರಿಷತ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಬೇಲೂರು ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜು ಅಭಿಮತ
  • ಜಾನಪದ ಗೀತ ಗಾಯನ ಕಾರ್ಯಕ್ರಮ
ಬೇಲೂರು: ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯ ಒಂದೇ ಎಂಬ ಆಶಯದೊಂದಿಗೆ ಬದುಕಿದ ಮಹಾನ್ ಕವಿ ಕುವೆಂಪು ಅವರ ಚಿಂತನೆಗಳು ಯುವಜನರಿಗೆ ಆದರ್ಶಪ್ರಾಯವಾಗಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜು ಹೇಳಿದರು.
ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ತಾಲೂಕು ಜಾನಪದ ಪರಿಷತ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕುವೆಂಪು ಒಂದು ನೆನಪು ಹಾಗೂ ಜಾನಪದ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಮತ್ತು ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಅವರ ನೆನಪು ಸದಾಕಾಲ ಜೀವಂತವಾಗಿದ್ದು, ಮುಂದೆಯೂ ಇರುತ್ತದೆ ಎಂದು ತಿಳಿಸಿದರು.
ಕನ್ನಡದ ಮಹಾ ಕವಿ, ಕಾದಂಬರಿಕಾರ, ನಾಟಕಕಾರರಾಗಿ ಸಮಾಜಮುಖಿ ಚಿಂತನೆಗಳೊಂದಿಗೆ ಯುಗದ ಕವಿಯಾಗಿ ಸಮಾಜಕ್ಕೆ ವಿಶ್ವ ಮಾನವ ಸಂದೇಶ ನೀಡಿದ್ದಾರೆ. ತಮ್ಮ ಕಾವ್ಯ, ನಾಟಕ ಮತ್ತು ಕಾದಂಬರಿಗಳಿಂದ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯದಲ್ಲಿ ಮೌಲ್ಯ ಮತ್ತು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿದ್ದು ಅವರು ಬಹು ಸಂಸ್ಕೃತಿಯನ್ನು ಮೆಚ್ಚಿಕೊಂಡಿದ್ದರು. ಇಂತಹ ಕವಿಗಳ ಬಗ್ಗೆ ಕೇವಲ ಪಠ್ಯ ಪುಸ್ತಕಗಳಲ್ಲಿ ಇದ್ದರೆ ಸಾಲದು ಅವುಗಳನ್ನು ಇಂದಿನ ಯುವ ಪೀಳಿಗೆಗೆ ಕಾರ್ಯಾಗಾರಗಳ ಮೂಲಕ ತಿಳಿಸಬೇಕು. ಇನ್ನೂ ಅನೇಕ ಕವಿಗಳ ಬಗ್ಗೆಯೂ ತಿಳಿಸುವ ಅಗತ್ಯವಿದೆ ಎಂದರು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಕನ್ನಡ ಮಣ್ಣಿನ ನಾಡ ಪದಗಳನ್ನು, ಜನಪದ ರಾಗಗಳನ್ನು, ಹಳ್ಳಿಗಳ ಹೃದಯದ ಧ್ವನಿಗಳನ್ನು ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಜೀವಂತಗೊಳಿಸಿದವರು. ಕುವೆಂಪು ಅವರನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಜಾನಪದವನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕುವೆಂಪು ಅವರ ಬರಹಗಳು ಗ್ರಾಮೀಣರ ಜೀವನದ ಉಸಿರು, ಜಾನಪದ ಪರಂಪರೆಯ ರಸ, ಮಣ್ಣಿನ ವಾಸನೆಯಿಂದ ತುಂಬಿದ್ದವು. ಜಾನಪದ ಎಂದರೆ ಹಳ್ಳಿಯ ಜನರ ಬದುಕಿನ ಕಲೆ ಎಂದು ಅಭಿಪ್ರಾಯಪಟ್ಟರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ, ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ನಿವೃತ್ತ ನೌಕರರ ಸಂಘದ ಮೊಗಪ್ಪಗೌಡ, ಜಯಪ್ರಕಾಶ್, ಇಂದಿರಮ್ಮ, ಶೇಷಪ್ಪ, ವೆಂಕಟೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net