ಸಾಕಾನೆ ಮುಂದೆ ಸೋತ ಕೆ.ಪಿ.ಕಾಲರ್-2

-ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ವ್ಯಕ್ತಿಯನ್ನು ಬಲಿ ಪಡೆದ ಕೆ.ಪಿ.ಕಾಲರ್-2 ಒಂಟಿ ಕಾಡಾನೆಯನ್ನು ಗುರುವಾರ ಶಿರಗುರು ಗ್ರಾಮದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ ಬೀಳಿಸಿರುವ ಸಿಬ್ಬಂದಿ
-ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ವ್ಯಕ್ತಿಯನ್ನು ಬಲಿ ಪಡೆದ ಕೆ.ಪಿ.ಕಾಲರ್-2 ಒಂಟಿ ಕಾಡಾನೆಯನ್ನು ಗುರುವಾರ ಶಿರಗುರು ಗ್ರಾಮದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ ಬೀಳಿಸಿರುವ ಸಿಬ್ಬಂದಿ
Published on

ಪ್ರಮುಖ ಮುಖ್ಯಾಂಶಗಳು

  • ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ
  • ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ

ಬೇಲೂರು:

ತಾಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹಾಗೂ ಕೆಲ ದಿನಗಳ ಹಿಂದಷ್ಟೆ ವ್ಯಕ್ತಿಯೊಬ್ಬರನ್ನು ಬಲಿ ಪಡೆದಿದ್ದ ಕೆ.ಪಿ.ಕಾಲರ್-2 ಹೆಸರಿನ ಕಾಡಾನೆಯನ್ನು ಗುರುವಾರ ಸಂಜೆ ಶಿರಗುರ ಗ್ರಾಮದ ಸಮೀಪ ಸೆರೆ ಹಿಡಿಯಲಾಯಿತು.

ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕುಮ್ಕಿ ಸಾಕಾನೆಗಳೊಂದಿಗೆ ಕಾರ್ಯಾಚರಣೆಗಿಳಿದು ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟಿತ್ತು.
ಕೆ.ಪಿ.ಕಾಲರ್-2 ಹೆಸರಿನ ಒಂಟಿ ಕಾಡಾನೆ ಸೆರೆಗೆ ಗುರುವಾರ ಬೆಳಗ್ಗೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಡಿಸಿಎಫ್ ಸೌರಭ್ ಕುಮಾರ್, ಸಿಸಿಎಫ್ ಏಡುಕೊಂಡಲು ನೇತೃತ್ವದಲ್ಲಿ ಕುಮ್ಕಿ ಸಾಕಾನೆಗಳಾದ ಮಹೇಂದ್ರ, ಅಜ್ಜಯ್ಯ, ಪ್ರಶಾಂತ್, ಧನಂಜಯ, ಏಕಲವ್ಯ, ಈಶ್ವರ, ಲಕ್ಷ್ಮಣನೊಂದಿಗೆ ಕಾರ್ಯಾಚರಣೆ ಶುರು ಮಾಡಲಾಯಿತು.
ಒಂಟಿ ಕಾಡಾನೆ ತಾಲೂಕಿನ ಕೊಗೋಡು, ಐಬಿಸಿ ತೋಟ, ತೊಳಲು, ಮತ್ತಿಹಳ್ಳಿ, ಹಂಜಿಹಳ್ಳಿ, ನಾಗೇನಹಳ್ಳಿ ಸೇರಿದಂತೆ ಸಮೀಪದ ಗ್ರಾಮಗಳಲೆಲ್ಲ ಓಡಾಡಿತು. ಬಳಿಕ ಇದರಿಂದ ಅರಿವಳಿಕೆ ನೀಡಲು ಹರಸಾಹಸ ಪಡುವಂತಾಯಿತು. ಅಂತಿಮವಾಗಿ ಶಿರಗುರ ಗ್ರಾಮ ಸಮೀಪವಿದ ಕಾಫಿ ತೋಟದಲ್ಲಿ ಇಟಿಎಫ್ ಸಿಬ್ಬಂದಿ ಪತ್ತೆ ಹಚ್ಚಿ ಅರಿವಳಿಕೆ ನೀಡಿದರು. ಸತತ ಏಳು ಗಂಟೆ ಕಾರ್ಯಾಚರಣೆ ನಂತರ ಅರಿವಳಿಕೆ ನೀಡಿದರೂ ಕಾಡಾನೆ ನಿಲ್ಲದೆ ಒಂದು ಕಿ.ಮೀ. ಕ್ರಮಿಸಿ ಬಳಿಕ ನೆಲಕ್ಕುರುಳಿತು. ನಂತರ ಸಾಕಾನೆಗಳ ನೆರವಿನಿಂದ ಎಚ್ಚರಿಕೆಯಿಂದ ಸೆರೆ ಹಿಡಿಯಲಾಯಿತು.
ನಂತರ ಸುರಕ್ಷಿತವಾಗಿ ಸಾಕಾನೆಗಳ ನೆರವಿನಿಂದ ಕಿಮೀ ದೂರದ ನಿಗದಿತ ಸ್ಥಳಕ್ಕೆ ಎಳೆದು ತಂದು ಲಾರಿಗೆ ಹತ್ತಿಸಲಾಯಿತು. ದುಬಾರೆ ಅರಣ್ಯಕ್ಕೆ ಕಾಡಾನೆಯನ್ನು ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.
ಸಕಲೇಶಪುರ ಎಸಿಎಫ್ ಮಧುಸೂದನ್, ಮೋಹನ್ ಕುಮಾರ್, ಇಟಿಎಫ್ ಎಸಿಎಫ್ ಉಮಾಪತಿ, ವಲಯ ಅರಣ್ಯಧಿಕಾರಿ ಯತೀಶ್ ಸೇರಿದಂತೆ ವಿವಿಧ ತಾಲೂಕಿನ ಅರಣ್ಯಧಿಕಾರಿಗಳು, ಇಟಿಎಫ್ ಮತ್ತು ಆರ್‌ಆರ್‌ಟಿ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net