ಕೆಂಪೇಗೌಡ ದೂರದೃಷ್ಟಿಯ ಆಡಳಿತಗಾರ

ಅರಕಲಗೂಡಿನಲ್ಲಿ ತಾಲೂಕು ಮಹಿಳಾ ಒಕ್ಕಲಿಗರ ಸಂಘದಿಂದ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ, ಎ.ಮಂಜು, ಎಚ್.ಪಿ.ಶ್ರೀಧರ್‌ಗೌಡ, ರಘುಗೌಡ, ಎಚ್.ಎಸ್.ರಶ್ಮಿ ಇತರರಿದ್ದರು.
ಅರಕಲಗೂಡಿನಲ್ಲಿ ತಾಲೂಕು ಮಹಿಳಾ ಒಕ್ಕಲಿಗರ ಸಂಘದಿಂದ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ, ಎ.ಮಂಜು, ಎಚ್.ಪಿ.ಶ್ರೀಧರ್‌ಗೌಡ, ರಘುಗೌಡ, ಎಚ್.ಎಸ್.ರಶ್ಮಿ ಇತರರಿದ್ದರು.
Published on

ಅರಕಲಗೂಡು:

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಸಮರ್ಥ ಆಡಳಿತ ಮತ್ತು ಅಭಿವೃದ್ಧಿ ಪರ ಚಿಂತನೆ ಫಲವಾಗಿ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಾನಗರವಾಗಿ ಬೆಳೆದಿದೆ ಎಂದು ಹಾಸನ ಆದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಮಹಿಳಾ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಕೆಂಪೇಗೌಡರು ಕೇವಲ ಒಂದು ನಗರವನ್ನು ನಿರ್ಮಿಸಿದವರಲ್ಲ, ಮುಂದಿನ ಹಲವು ತಲೆಮಾರುಗಳ ಅಗತ್ಯಗಳನ್ನು ಮನಗಂಡು ಯೋಜಿತ ನಗರ ನಿರ್ಮಾಣ ಮಾಡಿದ ದೂರದೃಷ್ಟಿಯ ಆಡಳಿತಗಾರರಾಗಿದ್ದರು. ಲೋಕಕಲ್ಯಾಣದ ದೃಷ್ಟಿಯಿಂದ ಕೆರೆಗಳು, ಪೇಟೆಗಳು, ರಸ್ತೆಗಳು, ದೇವಾಲಯಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ರೂಪಿಸಿದ್ದರಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ವಿಶ್ವದ ಗಮನ ಸೆಳೆದಿದೆ ಎಂದು ಹೇಳಿದರು.
ಇಂತಹ ಮಹಾನ್ ವ್ಯಕ್ತಿತ್ವದ ಸ್ಮರಣೆ ಮಾಡುವುದು ಪುಣ್ಯದ ಕಾರ್ಯ. ಅವರ ಆದರ್ಶಗಳನ್ನು ಇಂದಿನ ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶಿಕ್ಷಣದ ಜತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವುದು ಅತ್ಯಗತ್ಯವಾಗಿದೆ. ವಿದ್ಯಾಭ್ಯಾಸ ಪಡೆದವರು ಕೆಲವೊಮ್ಮೆ ಭ್ರಷ್ಟರಾಗಬಹುದು, ಆದರೆ ಉತ್ತಮ ಸಂಸ್ಕಾರ ಹೊಂದಿದವರು ಎಂದಿಗೂ ಭ್ರಷ್ಟರಾಗುವುದಿಲ್ಲ. ಮಕ್ಕಳ ಸಾಧನೆಯ ಹಿಂದೆ ಪಾಲಕರ ತ್ಯಾಗ, ಪರಿಶ್ರಮ ಮತ್ತು ಪ್ರೋತ್ಸಾಹ ಅಡಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಅರಕಲಗೂಡು ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿರುವುದು ಸಂತಸದ ವಿಷಯ. ವಿದ್ಯಾರ್ಥಿಗಳು ಇದೇ ರೀತಿಯ ಶ್ರದ್ಧೆ ಮತ್ತು ಶಿಸ್ತಿನಿಂದ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಆಶಿಸಿದರು.
ಆದಿಚುಂಚನಗಿರಿ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಸಮಾಜದ ಯುವಜನರನ್ನು ಉನ್ನತ ಹುದ್ದೆಗಳಿಗೆ ತಲುಪಿಸಲು ಅಪಾರ ಶ್ರಮವಹಿಸಿದ್ದರು. ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಯುವಕರಿಗೆ ಪ್ರೇರಣೆ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.
ಶಾಸಕ ಎ.ಮಂಜು ಮಾತನಾಡಿ, ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಆಡಳಿತವೇ ಬೆಂಗಳೂರಿನ ಬೆಳವಣಿಗೆಗೆ ಭದ್ರ ಅಡಿಪಾಯವಾಗಿದೆ. ಸಾವಿರಾರು ಕೆರೆಗಳನ್ನು ನಿರ್ಮಿಸಿ, ವ್ಯಾಪಾರಕ್ಕಾಗಿ ಪೇಟೆಗಳನ್ನು ಸ್ಥಾಪಿಸಿ, ನಾಲ್ಕು ದಿಕ್ಕುಗಳಲ್ಲಿ ಗೋಪುರಗಳನ್ನು ನಿರ್ಮಿಸುವ ಮೂಲಕ ಸಮಗ್ರ ನಗರಾಭಿವೃದ್ಧಿಯ ಪರಿಕಲ್ಪನೆಯನ್ನು ಅವರು ಸಾಕಾರಗೊಳಿಸಿದ್ದರು. ಇಂದು ಬೆಂಗಳೂರು ಎಲ್ಲರ ನೆಲೆಯಾಗಿ, ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವುದು ಅವರ ದೂರದೃಷ್ಟಿಯ ಫಲವಾಗಿದೆ ಎಂದರು.
ರೈತಾಪಿ ಕುಟುಂಬದಿಂದ ಬಂದ ಎಚ್.ಡಿ.ದೇವೇಗೌಡ ಅವರು ದೇಶದ ಪ್ರಧಾನಮಂತ್ರಿಯಾಗಿ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದು, ಒಕ್ಕಲಿಗ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಪ್ರಗತಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ.ಶ್ರೀಧರ್ ಗೌಡ ಮಾತನಾಡಿ, ನಾಡಿನ ಅಭಿವೃದ್ಧಿಗೆ ಒಕ್ಕಲಿಗ ಸಮಾಜದ ಅನೇಕ ಮಹನೀಯರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಸಮಾಜದ ಸಂಘಟನೆ, ಶಿಕ್ಷಣ ಮತ್ತು ಸೇವಾ ಮನೋಭಾವದಿಂದಲೇ ಅಭಿವೃದ್ಧಿ ಸಾಧ್ಯವಾಗಿದ್ದು, ಕೆಂಪೇಗೌಡರ ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದರು.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸದ ಶ್ರೇಯಸ್ ಪಟೇಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಮುಖಂಡರಾದ ಸತೀಶ್, ಕುಮಾರ್, ತಾಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಎಚ್.ಎಸ್.ರಶ್ಮಿ ಪ್ರವೀಣ್, ಪುಷ್ಪ ಪ್ರಭು ಶ್ರೀಧರ್, ಮಂಜುಳಾ ಸೋಮಶೇಖರ್, ಮೀನಾಕ್ಷಿ, ಅಶ್ವಿನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net