ಧರ್ಮದ ಮೌಲ್ಯಗಳಿಗೆ ಚ್ಯುತಿ ಬಂದಾಗ ಹೋರಾಡಲೂ ಸಿದ್ಧರಾಗಿ - ಕಾರ್ಜುವಳ್ಳಿ ಶ್ರೀ
ಆಲೂರು ಗಣಪತಿ ಪೆಂಡಾಲಿನಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ, ಕೆ. ಟಿ. ಉಲ್ಲಾಸ್, ಬಿ. ಜಿ. ಸದಾಶಿವಪ್ಪ, ಕೆ. ಪಿ. ರವಿ ಇತರರು ಹಾಜರಿದ್ದರು.
ಆಲೂರು:ಮಕ್ಕಳಿಗೆ ಪ್ರಾರಂಭಿಕ ಹಂತದ ದಿನಚರಿಯೊಳಗೇ ಧಾರ್ಮಿಕ ಸಂಸ್ಕಾರ ಕಲಿಸಿ
ಎಂದು ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಕಸಬಾ ಹೋಬಳಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಹಿಂದೂ ಸಮಾಜೋತ್ಸವ ಸಾನ್ನಿಧ್ಯ ವಹಿಸಿ ಅವರು ಅನುಗ್ರಹ ಸಂದೇಶ ನೀಡಿದರು.
ಹಿಂದೂಗಳು ಒಳಜಾತಿ, ಒಳಪಂಗಡಗಳ ತಾರತಮ್ಯ ಬಿಟ್ಟು ಒಂದಾಗಬೇಕು.ದೇವರಲ್ಲಿ ಭಯ ಮತ್ತು ಭಕ್ತಿ ಇದ್ದರೆ ಸನ್ನಡತೆ ತಾನಾಗಿಯೇ ಮೂಡುತ್ತದೆ. ಹಿಂದೂ ಧರ್ಮೀಯರು ಶಾಂತವಾಗಿದ್ದು ಸಹ ಜೀವನ ನಡೆಸಬೇಕು. ಧರ್ಮಕ್ಕೆ ಚ್ಯುತಿ ಬಂದಾಗ ಮೌಲ್ಯಗಳ ಸಂರಕ್ಷಣೆಗೆ
ರೌದ್ರಾವತಾರದೊಂದಿಗೆ ಹೋರಾಡುವುದನ್ನೂ ಕಲಿತಿರಬೇಕು ಎಂದರು.
ಇದು ಗಾಂಧೀಜಿ ಕಾಲವಲ್ಲ:
ಇದು ಗಾಂಧೀಜಿ ಕಾಲವಲ್ಲ. ಧರ್ಮದ ವಿಚಾರದಲ್ಲಿ ಯಾರೇ ನಮಗೆ ಧಕ್ಕೆ ಮಾಡುವ ಸಂದರ್ಭ ಎದುರಾದರೆ ನೈತಿಕವಾಗಿ ಹೋರಾಡಬೇಕು. ನಾವಾಗಿಯೇ ಎದುರಾಳಿಯೊಂದಿಗೆ ಹೊಡೆದಾಡಲು ಇಳಿಯಬಾರದು. ಆದರೆ ಧರ್ಮದ ವಿಚಾರದಲ್ಲಿ ಎದುರಾಳಿ ದಂಗೆ ಎದ್ದು ಬಂದರೆ ಸಮರ್ಥವಾಗಿ
ಅದನ್ನು ಎದುರಿಸುವ ಸಾಮರ್ಥ್ಯ ಹೊಂದಿರಬೇಕು ಎಂದರು.
ನ್ಯಾಯ ದೊರಕುವವರೆಗೂ ಹೋರಾಟ ಮಾಡಬೇಕು
ಹಿಂದೂ ಕಾರ್ಯಕರ್ತರ ಹತ್ಯೆಯಾದ ಸಂದರ್ಭದಲ್ಲಿ ನ್ಯಾಯ ದೊರಕುವವರೆಗೂ ಹೋರಾಟ
ಮಾಡಬೇಕು. ಪ್ರತಿಯೊಬ್ಬರ ಅಂತರಂಗದಲ್ಲಿರುವ ಚೇತನವನ್ನು ಬಡಿದೇಳಿಸಲು ಉತ್ಸವಗಳು
ಪೂರಕವಾಗಿವೆ. ವಿವಿಧ ಧರ್ಮಗಳು ಭಾರತೀಯ ಸಂಸ್ಕೃತಿ ಮೇಲೆ ಆಕ್ರಮಣ ಮಾಡುವ ಹುನ್ನಾರ ನಡೆಸಿರುವ ಸಂದರ್ಭ ನಾವೆಲ್ಲರೂ ಒಳ ಪಂಗಡಗಳ ತಾರತಮ್ಯ ಬಿಟ್ಟು ಒಗ್ಗಟ್ಟಾಗಬೇಕು ಎಂದರು.
ಇದು ಸನಾತನ ಹಿಂದೂ ಧರ್ಮದ ಮಠ.
ಕಾರ್ಜುವಳ್ಳಿ ಸಂಸ್ಥಾನ ಹಿರೇಮಠವು ಕೇವಲ ವೀರಶೈವ, ಲಿಂಗಾಯಿತ ಸಮುದಾಯದ
ಸಂಸ್ಥಾನ ಅಲ್ಲ. ಈ ಭಾವನೆಯನ್ನೂ ಯಾರೂ ಇಟ್ಟುಕೊಳ್ಳಬಾರದು. ಇದು ಸನಾತನ ಹಿಂದೂ ಧರ್ಮದ ಮಠ. ಆಚರಣೆಗಳ ದೃಷ್ಟಿಯಲ್ಲಿ ಎಲ್ಲ ಹಿಂದೂ ಬಾಂಧವರಿಗೂ ಗೌರವಿಸಿ ಅನುಗ್ರಹಿಸುವ ಪರಂಪರೆ ನಮ್ಮದು. ಸನಾತನ ಧರ್ಮದ ಉಳಿವಿಗೆ ಎಲ್ಲರೂ ಒಗ್ಗಟ್ಟು ತೋರುವುದೇ ಶಕ್ತಿಯ ಪ್ರತೀಕ ಎಂದರು.
ಸಂಕಲಾಪುರ ಮಠದ ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೆ. ಟಿ. ಉಲ್ಲಾಸ್, ಸಮಿತಿ ಅಧ್ಯಕ್ಷ ಬಿ. ಜಿ. ಸದಾಶಿವಪ್ಪ, ಕಾರ್ಯಾಧ್ಯಕ್ಷ ಕೆ. ಪಿ. ರವಿ, ಕೋಶಾಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.