ಪ್ರತಿಭಾ ಪುರಸ್ಕಾರ, ಕುರುಬ ಸಮಾಜದ ನೂತನ ನೌಕರರಿಗೆ ಸನ್ಮಾನ
ಬೇಲೂರು: ಹಿಂದಿನಿಂದಲೂ ರಥಬೀದಿ ಎಂದೇ ಖ್ಯಾತಿಯಾಗಿರುವ ಪಟ್ಟಣದ ಹೊಳೆಬೀದಿ ರಸ್ತೆಯ ಪ್ರಾರಂಭದಲ್ಲಿ ಸಂತಶ್ರೇಷ್ಠ ಶ್ರೀ ಕನಕದಾಸರ ಪುತ್ಥಳಿ ಸ್ಥಾಪಿಸಿ ಅವರ ಹೆಸರನ್ನು ನಾಮಕರಣ ಮಾಡಲು ಬದ್ಧನಾಗಿದ್ದೇನೆ ಎಂದು ಶಾಸಕ ಎಚ್.ಕೆ.ಸುರೇಶ್ ಭರವಸೆ ನೀಡಿದರು.
ಪಟ್ಟಣದ ಹೇಮಾವತಿ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾಲೂಕು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ನೂತನ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನಕದಾಸರು ಹಲವಾರು ಕೀರ್ತನೆಗಳನ್ನು ರಚಿಸಿ ಕೀರ್ತನೆಗಳ ಮೂಲಕವೇ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು ಎಂದು ತಿಳಿಸಿದರು.
ಬೇಲೂರಿಗೆ ದಾಸ ಶ್ರೇಷ್ಠರಾದ ಕನಕದಾಸರು ಬಂದಿರುವ ಹಿನ್ನೆಲೆಯಲ್ಲಿ ಕನಕದಾಸರ ಪುತ್ಥಳಿ ಸ್ಥಾಪಿಸಿ ಅವರ ಹೆಸರನ್ನಿಡಲಾಗುವುದು. ಈಗಾಗಲೇ ಪಟ್ಟಣದ ಹೊಳೆಬೀದಿಗೆ ಸಂಪರ್ಕ ಕಲ್ಪಿಸಲು ಲೋಕೋಪಯೋಗಿ ಸಚಿವರು ಸ್ವತಃ ಬೇಲೂರಿಗೆ ಭೇಟಿ ನೀಡಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸೇತುವೆ ಹಾಗೂ ರಸ್ತೆ ನಿರ್ಮಾಣವಾದ ನಂತರ ಪುತ್ಥಳಿ ನಿರ್ಮಾಣ ಕಾರ್ಯ ನಡೆಯಲಿದೆ. ಸಮುದಾಯದ ಸರ್ವತೋಮುಖ ಪ್ರಗತಿಗೆ ನೆರವು ನೀಡಲಾಗುವುದು. ವಿಶೇಷವಾಗಿ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಕಟ್ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಬಿ.ಎಂ.ಸಂತೋಷ್ ಮಾತನಾಡಿ, ಸಮುದಾಯದ ಪ್ರಗತಿಗೆ ರಾಜಕೀಯ ಸ್ಥಾನ ಅತ್ಯಂತ ಅವಶ್ಯ. ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರು ಮುಂದೆ ಬರುವ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಬೇಕು. ಜತೆಗೆ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಹಾಸನ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಬಹುತೇಕ ಭಾಗದಲ್ಲಿ ಕನಕ ಭವನವಿದೆ. ಆದರೆ ವಿಶ್ವ ವಿಖ್ಯಾತ ಬೇಲೂರಿನಲ್ಲಿ ಏಕೆ ನಿರ್ಮಾಣವಾಗಿಲ್ಲ, ಇಲ್ಲಿನ ಮುಖಂಡರು ಸೇರಿ ಭವನ ನಿರ್ಮಾಣಕ್ಕೆ ಮುಂದಾಗಬೇಕು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕನಕ ಭವನಕ್ಕೆ ಸಹಾಯವನ್ನು ನೀಡಲಿದ್ದಾರೆ. ಜಿಲ್ಲೆಯಲ್ಲಿ ಪ್ರಥಮವಾಗಿ ಬೇಲೂರಿನಲ್ಲಿ ನೌಕರರು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದ್ದು ಇತರರಿಗೆ ಮಾದರಿಯಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಕೆಪಿಸಿಸಿ ಸದಸ್ಯ ಬಿ.ಎಲ್.ಧರ್ಮೇಗೌಡ, ತಾಲೂಕು ಕುರುಬ ಸಂಘದ ಅಧ್ಯಕ್ಷೆ ಹೇಮಾವತಿ ಮಂಜುನಾಥ್, ಕನಕ ನೌಕರರ ಸಂಘದ ಅಧ್ಯಕ್ಷ ಗಿರೀಶ್, ಮುಖಂಡರಾದ ಪ್ರಕಾಶ್, ರಂಗನಾಥಸ್ವಾಮಿ, ಚಂದ್ರಶೇಖರ, ಸೌಮ್ಯಾಆನಂದ್, ರಂಗನಾಥ, ಹರೀಶ್, ಅನಂದ್, ನಾಗೇಗೌಡ, ಶ್ರೀನಿವಾಸ, ದಿವ್ಯಾ ಕುಮಾರ್ ಇತರರಿದ್ದರು.