ಅರಕಲಗೂಡಿನಲ್ಲಿ ಗುರುವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಗೌರವಿಸಲಾಯಿತು. ಕೆ.ಸಿ. ಸೌಮ್ಯ, ಕೃಷ್ಣೇಗೌಡ, ವಿದ್ಯಾರಾಜ್ ಅರಸು, ರಂಗಸ್ವಾಮಿ ಇತರರಿದ್ದರು.
ಮಹಾನ್ ವ್ಯಕ್ತಿಗಳ ಜೀವನವೂ ಕಷ್ಟದ ಹಾದಿಯಿಂದ ಕೂಡಿರುತ್ತದೆ. ಆ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆದಾಗ ಮಾತ್ರ ಮಹನೀಯರಾಗಿ ಬೆಳೆಯಲು ಸಾಧ್ಯ ಎಂದು ತಹಸೀಲ್ದಾರ್ ಕೆ.ಸಿ ಸೌಮ್ಯಾ ಹೇಳಿದರು.
ಪಟ್ಟಣದ ದೇವರಾಜು ಅರಸು ಭವನದಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮದ ಮಾತನಾಡಿದರು.
ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹನೀಯರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಮುಖ್ಯವಾಗಿ ಇಂತಹ ಮಹನೀಯರ ಜಯಂತಿಯನ್ನು ಪ್ರತಿಯೊಂದು ಮನೆಯಲ್ಲೂ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿದ ದೇವರಾಜ ಅರಸು ಅವರು, ಬಡವರಿಗೆ ಭೂಮಿ ದೊರಕಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದರು. ಅಧಿಕಾರದಲ್ಲಿದ್ದ ಅವಧಿಯಲ್ಲಿ ಹಲವು ಸವಾಲುಗಳನ್ನು ಎದುರಿಸಿದರೂ ತಮ್ಮ ವೈಯಕ್ತಿಕ ಕಷ್ಟಗಳನ್ನು ಮರೆತು ದೀನದಲಿತರ ಅಭಿವೃದ್ಧಿಗೆ ಪಣತೊಟ್ಟ ನಾಯಕರು ಎಂದು ಸ್ಮರಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸತೀಶ್, ಕಂದಾಯ ನಿರೀಕ್ಷಕ ಲೋಕೇಶ್, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಉಳಗಾಡ್ಡಿ, ಉಮೇಶ್, ಅಜಿತ್ ಇತರರಿದ್ದರು. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.