ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ವತಿಯಿಂದ ಏರ್ಪಡಿಸಿರುವ ಜತನಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಹಾಸನದ ಹೊಯ್ಸಳ ವಾರಿಯರ್ಸ್ ತಂಡದ ಟಿ-ಶರ್ಟ್ ಹಾಗೂ ಆಹ್ವಾನ ಪತ್ರಿಕೆಯನ್ನು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಿಡುಗಡೆ ಮಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಇತರರು ಇದ್ದರು.
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜನ್ಮದಿನ ಹಾಗೂ ಜೆಡಿಎಸ್ ಪಕ್ಷದ ರಜತ ಮಹೋತ್ಸವದ ಪ್ರಯುಕ್ತ ಪಕ್ಷದ ಸಾಮಾಜಿಕ ಜಾಲತಾಣ ಮತ್ತು ಯುವ ಜನತಾ ದಳ ವಿಭಾಗದಿಂದ ರಾಜ್ಯ ಮಟ್ಟದ ಜನತಾ ಪ್ರಿಮಿಯರ್ ಲೀಗ್ (ಜೆಪಿಎಲ್) ಏರ್ಪಡಿಸಲಾಗಿದೆ.
ಮೇ 15ರಿಂದ 17ರ ವರೆಗೆ ಬೆಂಗಳೂರಿನ ಮಾದಾವರದ ನೈಸ್ ರಸ್ತೆ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಅವರು ಭಾನುವಾರ ಹಾಸನದ ಹೊಯ್ಸಳ ವಾರಿಯರ್ಸ್ ತಂಡದ ಟಿ-ಶರ್ಟ್ ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಸೂರಜ್ ರೇವಣ್ಣ, ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಬೇಕೆಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣ ವಿಭಾಗದವರು ಸೇರಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ. ಪ್ರತಿ ಜಿಲ್ಲೆಯಿಂದ ಒಂದು ತಂಡ ಭಾಗವಹಿಸಲಿದೆ ಎಂದರು.
ಮೇ 15ರ ಶುಕ್ರವಾರ ಸಂಜೆ 5 ಗಂಟೆಗೆ ಪಂದ್ಯಾವಳಿ ಆರಂಭಗೊಳ್ಳಲಿದೆ. ಜೆಡಿಎಸ್ ಸಾಮಾಜಿಕ ಜಾಲತಾಣಗಳ ವಿಭಾಗ ಅಧ್ಯಕ್ಷ ಎಚ್.ಎಸ್.ಚಂದನ್, ಯುವ ಮುಖಂಡ ಯಲಹಂಕ ಪ್ರವೀಣ್ ಕಾರ್ಯಕ್ರಮ ನೇತೃತ್ವ ವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿ ಎಲ್ಲ ಜೆಡಿಎಸ್ ಶಾಸಕರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.