ಮಕ್ಕಳಿಗೆ ಶ್ರದ್ಧೆ, ಸಂಸ್ಕಾರ ಕಲಿಸುವುದು ಗುರುಗಳ ಕರ್ತವ್ಯ

ಬೇಲೂರು ತಾಲೂಕಿನ ಅಡಗೂರು ಸಮೀಪದ ಬಿ.ಪಿ.ಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಹಿರಿಯ ಶಿಕ್ಷಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಎಂ.ಇ.ಜವರಯ್ಯ, ಮಲ್ಲೇಶಪ್ಪ,  ಭೂದೇಶ, ಸಾವಿತ್ರಮ್ಮ, ನಂಜೇಗೌಡ, ಜಯಣ್ಣಗೌಡ, ನಾಗರಾಜ್, ಪುಟ್ಟರಾಜು, ಗಂಗಣ್ಣ ಇತರರು ಇದ್ದರು.
ಬೇಲೂರು ತಾಲೂಕಿನ ಅಡಗೂರು ಸಮೀಪದ ಬಿ.ಪಿ.ಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಹಿರಿಯ ಶಿಕ್ಷಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಎಂ.ಇ.ಜವರಯ್ಯ, ಮಲ್ಲೇಶಪ್ಪ, ಭೂದೇಶ, ಸಾವಿತ್ರಮ್ಮ, ನಂಜೇಗೌಡ, ಜಯಣ್ಣಗೌಡ, ನಾಗರಾಜ್, ಪುಟ್ಟರಾಜು, ಗಂಗಣ್ಣ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಮುಖ್ಯ ಶಿಕ್ಷಕ ಎಂ.ಇ.ಜವರಯ್ಯ ಅಭಿಪ್ರಾಯ
  • ಬಿ.ಪಿ.ಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಂದನೆ
ಬೇಲೂರು: ಮಕ್ಕಳಿಗೆ ಶ್ರದ್ಧೆ ಮತ್ತು ಸಂಸ್ಕಾರ ಕಲಿಸುವಂತಹ ಶಿಕ್ಷಣ ನೀಡಬೇಕಾದದ್ದು ಗುರುಗಳ ಕರ್ತವ್ಯವಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ಇ.ಜವರಯ್ಯ ಹೇಳಿದರು.
ತಾಲೂಕಿನ ಅಡಗೂರು ಸಮೀಪದ ಬಿ.ಪಿ.ಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಮತ್ತು ಹಳೇ ವಿದ್ಯಾರ್ಥಿಗಳು ಗುರುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, 50 ವರ್ಷಗಳ ಹಿಂದೆ ನಾನು ಈ ಊರಿಗೆ ಸರ್ಕಾರಿ ಶಾಲೆ ಶಿಕ್ಷಕನಾಗಿ ಬಂದಾಗ ಸ್ವತಃ ಗ್ರಾಮಸ್ಥರು ಸೇರಿಕೊಂಡು ನನಗೆ ಉಳಿದುಕೊಳ್ಳಲು ಮನೆ ನಿರ್ಮಿಸಿ ಕೊಟ್ಟಿದ್ದಲ್ಲದೆ, ಊಟ ವ್ಯವಸ್ಥೆ ಕಲ್ಪಿಸಿ ಕುಗ್ರಾಮವಾದ ಈ ಗ್ರಾಮದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ನನಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವಾಗಿ ನೂರಾರು ವಿದ್ಯಾರ್ಥಿಗಳು ಈ ಊರಿನಿಂದ ಉನ್ನತ ಹುದ್ದೆಗೆ ಹೋಗಿರುವುದು ಶ್ಲಾಘನೀಯ ಎಂದರು.
ಅಂದು ಶಿಸ್ತು ಮತ್ತು ಶ್ರದ್ಧೆಗೆ ಒತ್ತು ನೀಡಿ ಶಿಕ್ಷಣ ಕಲಿಸಿದ್ದರ ಪರಿಣಾಮ ಉನ್ನತ ಹುದ್ದೆ ಪಡೆಯಲು ಸಾಧ್ಯವಾಗಿದೆ. ಹಾಗಾಗಿ ಮಕ್ಕಳಲ್ಲಿ ಸಂಸ್ಕಾರಯುತ ಶಿಕ್ಷಣ ಹಾಗೂ ಗುರು, ಹಿರಿಯರಿಗೆ ವಿಧೇಯರಾಗುವ ಮೌಲ್ಯಯುತ ಶಿಕ್ಷಣ ನೀಡಬೇಕಾದದ್ದು ಅಗತ್ಯವಾಗಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಐಟಿಬಿಟಿ ಕಂಪನಿಗಳಲ್ಲಿ ದುಡಿದು ಕೌಟುಂಬಿಕ ಬಾಂಧವ್ಯದಿಂದ ವಿಮುಕ್ತರಾಗುವ ಸಂಭವ ಹೆಚ್ಚು. ಹಾಗಾಗಿ, ವೃದ್ಧಾಪ್ಯದಲ್ಲಿ ತಂದೆ, ತಾಯಿಗಳನ್ನ ಸಾಕಿ ಸಲಹುವ ಬಾಂಧವ್ಯ ಹಾಗೂ ಊರಿಗೆ ತನ್ನ ಕೈಲಾದ ಸೇವೆ ಸಲ್ಲಿಸುವ ಗುಣ ಬೆಳೆಸುವಂತಹ ಸಂಸ್ಕಾರಯುತ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಅಲ್ಲದೆ 50 ವರ್ಷಗಳ ಹಿಂದಿನ ನೆನಪನ್ನು ಸ್ಮರಿಸಿದ ಅವರು, ಗ್ರಾಮಸ್ಥರು ತೋರಿಸಿದ ಪ್ರೀತಿ, ಗುರುಗಳ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಮಾತಿನಂತೆ ಹಳೆಯ ವಿದ್ಯಾರ್ಥಿಗಳು ಇಂದು ಒಟ್ಟಾಗಿ ವಿದ್ಯೆ ಕಲಿಸಿದ ಗುರುಗಳನ್ನು ತಮ್ಮ ಊರಿಗೆ ಕರೆಸಿ ಅಭಿನಂದಿಸಿದ್ದು ನನ್ನ ಜೀವನದಲ್ಲಿ ಮರೆಯಲಾಗದ ದಿನ. ಇಂತಹ ಗುರುವಂದನೆ ಕಾರ್ಯಕ್ರಮಗಳು ಗುರು-ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸುವಂತಹ ಸಂಪ್ರದಾಯಕ್ಕೆ ಅಡಿಪಾಯವಾಗಿರುತ್ತದೆ ಎಂದರು.
ಗ್ರಾಮದ ಹಿರಿಯ ವಿದ್ಯಾರ್ಥಿ, ಡಯಟ್‌ನ ನಿವೃತ್ತ ಪ್ರಾಂಶುಪಾಲ ಮಲ್ಲೇಶಪ್ಪ ಮಾತನಾಡಿ, ಆಗಿನ ಕಾಲದಲ್ಲಿ ಶಾಲೆಯಿಂದ ಹೊರಗುಳಿದು ದನಗಳನ್ನು ಸಾಕುತ್ತ, ಶಿಕ್ಷಣದಿಂದ ವಂಚಿತರಾಗಿದ್ದ ಹಲವಾರು ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ಕರೆತಂದು ಶಾಲೆಯನ್ನೇ ಮನೆಯೆಂದು ಭಾವಿಸಿ ಅಲ್ಲೇ ಉಳಿದುಕೊಂಡು ನಮಗೆ ಶಿಕ್ಷಣ ಕಲಿಸಿದ್ದರ ಪರಿಣಾಮವಾಗಿ ಇಂದು ನಾವು ಉನ್ನತ ಹುದ್ದೆಗಳನ್ನು ಅಲಂಕರಿಸುವುದರ ಜತೆಗೆ ನಮ್ಮ ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸಲು ಅವಕಾಶವಾಗಿದೆ. ಇಂತಹ ಸೇವೆ ಮಾಡಿದಂತಹ ಜವರಯ್ಯ ಗುರುಗಳನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.
ಶಿಕ್ಷಕರಾದ ಭೂದೇಶ, ಸಾವಿತ್ರಮ್ಮ ಹಾಗೂ ನಂಜೇಗೌಡ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಯಣ್ಣಗೌಡ, ಮುಖ್ಯ ಶಿಕ್ಷಕ ನಾಗರಾಜ್, ಗ್ರಾಮದ ಮುಖಂಡ ಪುಟ್ಟರಾಜು, ಗಂಗಣ್ಣ ಇತರರು ಇದ್ದರು.
ಕಾರ್ಯಕ್ರಮದ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆದುಕೊಂಡು ಬಂದು ಗೌರವ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net