ಅಂಗವಿಕಲರಿಗೆ ಗೌರವ ನೀಡುವುದು ಎಲ್ಲರ ಕರ್ತವ್ಯ

ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದ ದಿ.ಗೌರಮ್ಮ ಪುಟ್ಟಸ್ವಾಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಆಯೋಜಿಸಿದ್ದ ಬ್ಯಾಗ್‌ರಹಿತ ದಿನ ಕಾರ್ಯಕ್ರಮದಲ್ಲಿ ಅಂಗವಿಕಲ ವ್ಯಕ್ತಿಗಳೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಅಂಗವಿಕಲ ನೌಕರರಾದ ರುದ್ರಪಟ್ಟಣ ಗ್ರಾಮ ಪಂಚಾಯಿತಿಯ ರವಿ ಹಾಗೂ ಹನ್ಯಾಳು ಗ್ರಾಮ ಪಂಚಾಯಿತಿಯ ಮನೋಜ್ ಅವರನ್ನು ಸನ್ಮಾನಿಸಲಾಯಿತು. ಕೆ.ಎನ್.ರವಿಕುಮಾರ್, ವಿದ್ಯಾರ್ಥಿಗಳು ಇದ್ದರು.
ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದ ದಿ.ಗೌರಮ್ಮ ಪುಟ್ಟಸ್ವಾಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಆಯೋಜಿಸಿದ್ದ ಬ್ಯಾಗ್‌ರಹಿತ ದಿನ ಕಾರ್ಯಕ್ರಮದಲ್ಲಿ ಅಂಗವಿಕಲ ವ್ಯಕ್ತಿಗಳೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಅಂಗವಿಕಲ ನೌಕರರಾದ ರುದ್ರಪಟ್ಟಣ ಗ್ರಾಮ ಪಂಚಾಯಿತಿಯ ರವಿ ಹಾಗೂ ಹನ್ಯಾಳು ಗ್ರಾಮ ಪಂಚಾಯಿತಿಯ ಮನೋಜ್ ಅವರನ್ನು ಸನ್ಮಾನಿಸಲಾಯಿತು. ಕೆ.ಎನ್.ರವಿಕುಮಾರ್, ವಿದ್ಯಾರ್ಥಿಗಳು ಇದ್ದರು.
Published on
ಅರಕಲಗೂಡು: ಅಂಗವಿಕಲರಿಗೆ ಸಹಾನುಭೂತಿ, ಕರುಣೆ ಹಾಗೂ ತಾಳ್ಮೆಯಿಂದ ಮಾತನಾಡುವುದರ ಜತೆಗೆ ಅವರ ಸ್ವಾಭಿಮಾನಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಎನ್.ರವಿಕುಮಾರ ಹೇಳಿದರು.
ತಾಲೂಕಿನ ಹನ್ಯಾಳು ಗ್ರಾಮದ ದಿ.ಗೌರಮ್ಮ ಪುಟ್ಟಸ್ವಾಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಇತ್ತೀಚೆಗೆ ಆಯೋಜಿಸಿದ್ದ ಬ್ಯಾಗ್‌ರಹಿತ ದಿನ ಕಾರ್ಯಕ್ರಮದಲ್ಲಿ ಅಂಗವಿಕಲರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಅಂಗವಿಕಲರು ದೈಹಿಕ ಅಥವಾ ಮಾನಸಿಕ ಸವಾಲುಗಳನ್ನು ಹೊಂದಿದ್ದರೂ ಸಮಾಜದ ಮುಖ್ಯವಾಹಿನಿಯಲ್ಲಿ ಸಾಧನೆ ಮಾಡಲು ಸಮರ್ಥರಾಗಿದ್ದಾರೆ. ಅವರೊಂದಿಗೆ ಮಾತನಾಡುವಾಗ ಸೂಕ್ತವಾದ ಭಾಷೆ ಹಾಗೂ ಸ್ಪಷ್ಟವಾದ ಸಂವಹನವನ್ನು ಬಳಸಬೇಕು. ಸಂಗೀತ ಕ್ಷೇತ್ರದ ಪಂಡಿತ ಪುಟ್ಟರಾಜ ಗವಾಯಿ, ಕ್ರೀಡಾ ಕ್ಷೇತ್ರದ ಎಚ್.ಎನ್.ಗಿರೀಶ್ ಹಾಗೂ ಮೌಂಟ್ ಎವರೆಸ್ಟ್ ಏರಿದ ಅನುಪಮಾ ಸಿನ್ಹಾ ಅವರಂತಹ ಸಾಧಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಅಂಗವಿಕಲ ನೌಕರ ರವಿ ಮಾತನಾಡಿ, ಅಂಗವಿಕಲರಿಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರದಿಂದ ದೊರೆಯುವ ವಿದ್ಯಾರ್ಥಿವೇತನ, ಮಾಸಿಕ ಭತ್ಯೆ, ಉಚಿತ ಬಸ್ ಪ್ರಯಾಣ, ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅಂಗವಿಕಲ ನೌಕರ ಮನೋಜ್ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಇದೇ ವೇಳೆ ಪಲ್ಸ್ ಪೋಲಿಯೋ ಕುರಿತು ಅರಿವು ಮೂಡಿಸಲಾಯಿತು. ರೆಡ್ ಕ್ರಾಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಅಲ್ಲದೆ, ಹಾಸನ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಮಾಸ್ಕ್‌ಗಳನ್ನು ವಿತರಿಸಲಾಯಿತು.
ಅಂಗವಿಕಲ ನೌಕರರಾದ ರುದ್ರಪಟ್ಟಣ ಗ್ರಾಮ ಪಂಚಾಯಿತಿಯ ರವಿ ಹಾಗೂ ಹನ್ಯಾಳು ಗ್ರಾಮ ಪಂಚಾಯಿತಿಯ ಮನೋಜ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಗ್‌ರಹಿತ ದಿನದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಒತ್ತಡರಹಿತ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಎಸ್‌ಡಿಎಂಸಿ ಸದಸ್ಯ ಜಯರಾಮ್, ಶಿಕ್ಷಕರಾದ ಸುಬ್ಬಲಕ್ಷ್ಮೀ, ಮೇಘನಾ, ಕುಮಾರ್, ರಂಗಯ್ಯ, ಅಂಗನವಾಡಿ ಕಾರ್ಯಕರ್ತೆ ನಂದಿನಿ, ಆಶಾ ಕಾರ್ಯಕರ್ತೆ ಸುಕನ್ಯಾ, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net